ಬೆಂಗಳೂರು: ಬೆಂಗಳೂರು ನಗರದ ರಸ್ತೆಗಳು ಗುಂಡಿ ಬಿದ್ದು ಮೃತ್ಯಕೂಪವಾಗಿ ಪರಿವರ್ತನೆಯಾಗುತ್ತಿರುವುದಕ್ಕೆ ನಗರದ “ಕರ್ನಾಟಕ ಸೀನಿಯರ್ಸ್ ಇಂಜಿನಿಯರ್ಸ್ ಫೋರಂ” ತೀವ್ರ ಕಳವಳ ವ್ಯಕ್ತಪಡಿಸಿದೆ.
ಕಮಲಾನಗರದ ಕರ್ನಾಟಕ ಇಂಜಿನಿಯರ್ಸ್ ಅಕಾಡೆಮಿಯಲ್ಲಿ ಸೀನಿಯರ್ಸ್ ಇಂಜಿನಿಯರ್ಸ್ ಫೋರಂನಿಂದ ಆಯೋಜಿಸಿದ್ದ “ವೈಟ್ ಟಾಪಿಂಗ್ – ದೀರ್ಘ ಕಾಲದ ಅರ್ಹತೆ ಮತ್ತು ಅನರ್ಹತೆ ಕುರಿತ ತಾಂತ್ರಿಕ ಕಾರ್ಯಾಗಾರದಲ್ಲಿ ನಿವೃತ್ತ ಇಂಜಿನಿಯರ್ ಗಳು ರಸ್ತೆಗಳ ನಿವರ್ಹಣೆ, ಜನರ ಜೀವ ರಕ್ಷಣೆ ಕುರಿತು ಗಹನವಾದ ಚರ್ಚೆ ನಡೆಸಿದರು. ಸರ್ಕಾರ ಕೂಡಲೇ ವಾಹನ ಸವಾರರಿಗೆ ಸುಗಮ ಸಂಚಾರಕ್ಕಾಗಿ ಹೈಕೋರ್ಟ್ ಆದೇಶ ಜಾರಿ ಮಾಡುವ ಜೊತೆಗೆ ಬಿಬಿಎಂಪಿ ರಸ್ತೆಗಳ ನಿರ್ವಹಣೆಗಾಗಿ ಈ ಹಿಂದೆ ನಿವೃತ್ತ ಮುಖ್ಯ ಇಂಜಿನಿಯರ್ ಕ್ಯಾಪ್ಟನ್ ರಾಜ ರಾಜು ಸಮಿತಿ ನೀಡಿದ್ದ ವರದಿಯನ್ನು ಜಾರಿಗೊಳಿಸಬೇಕೆಂದು ಒತ್ತಾಯಿಸಿದೆ.
ಸರ್ಕಾರದ ಕಾರ್ಯದರ್ಶಿ, ಸೀನಿಯರ್ಸ್ ಇಂಜಿನಿಯರ್ಸ್ ಒಕ್ಕೂಟದ ಅಧ್ಯಕ್ಷ ಕ್ಯಾಪ್ಟನ್ ರಾಜಾ ರಾವ್ ರಸ್ತೆಗಳ ಸ್ಥಿತಿಗತಿ ಮತ್ತು ನಿರ್ಹಹಣೆ ಕುರಿತು ಉಪನ್ಯಾಸ ನೀಡಿದರು. ವೈಟ್ ಟ್ಯಾಪಿಂಗ್ ನಿಂದ ರಸ್ತೆಗಳು ದೀರ್ಘಕಾಲದಲ್ಲಿ ಗುಂಡಿ ಬೀಳುವುದನ್ನು ತಪ್ಪಿಸಬಹುದು ಮತ್ತು ದುರಂತಗಳನ್ನು ತಗ್ಗಿಸಲು ಸಾಧ್ಯ ಎಂದು ಹೇಳಿದರು.
ನಗರದ ಜನತೆಗೆ ಸುಗಮ ಜೀವನಕ್ಕಾಗಿ ರಸ್ತೆಗಳು ಪೂರಕವಾಗಿರಬೇಕು. ಆದರೆ ಪ್ರತಿನಿತ್ಯ ಸಾವು – ನೋವಿನ ವರದಿಗಳು ಬರುತ್ತಿವೆ. ಸಾಮಾನ್ಯ ಜನ ತೊಂದರೆ ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಸರ್ಕಾರ ಕೂಡಲೇ ಎಚ್ಚೆತ್ತುಕೊಳ್ಳಬೇಕು ಎಂದು ಹೇಳಿದರು.
ಸೀನಿಯರ್ ಇಂಜಿನಿಯರ್ಸ್ ಫೋರಂನಿಂದ ತಕ್ಷಣವೇ ಮುಖ್ಯಮಂತ್ರಿ ಅವರಿಗೆ ಪತ್ರಬರೆದು ರಸ್ತೆಗಳ ನಿರ್ವಹಣೆ ಕುರಿತು ಸಮಗ್ರ ಮಾಹಿತಿ ನೀಡಲಾಗುವುದು. ಜನರ ಜೀವ ರಕ್ಷಣೆಗೆ ಕೈಗೊಳ್ಳಬೇಕಾದ ಸಮಗ್ರ ಕಾರ್ಯತಂತ್ರದ ಬಗ್ಗೆ ಸಲಹೆ ನೀಡಲಾಗುವುದು ಎಂದರು.
ನಗರದಲ್ಲಿ ಅಕ್ರಮ ಬಡಾವಣೆಗಳಿಂದ ಸಾಕಷ್ಟು ಸಮಸ್ಯೆಗಳು ಎದುರಾಗಿವೆ. ಹಳ್ಳ, ಕೆರೆ ಇದ್ದ ಜಾಗದಲ್ಲಿ ಬಡಾವಣೆ ನಿರ್ಮಾಣ ಮಾಡಲಾಗಿದೆ. ಸರ್ಕಾರ ರಸ್ತೆ ಸಂಚಾರವನ್ನು ಸುಗಮಗೊಳಿಸಲು ವ್ಯಾಪಕ ಕಾರ್ಯತಂತ್ರವನ್ನು ಅಳವಡಿಸಿಕೊಳ್ಳಬೇಕು. ಬಿಬಿಎಂಪಿ ಜೊತೆ ವಿವಿಧ ಇಲಾಖೆಗಳು ಕೂಡ ಕೈಜೋಡಿಸಿ ಕೆಲಸ ಮಾಡಬೇಕು ಎಂದು ಕ್ಯಾಪ್ಟನ್ ರಾಜಾರಾಮ್ ಹೇಳಿದರು.
ನಂದಿ ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್ಪ್ರೈಸ್ ಲಿಮಿಟೆಡ್ ನ ಪ್ರಾಜೆಕ್ಟ್ ಡೈರೆಕ್ಟರ್ ಡಿ ಪ್ರಸಾದ್, ವೈಟ್ ಟಾಪಿಂಗ್ ರಸ್ತೆ ನಿರ್ಮಾಣದ ತತ್ವಗಳು ಮತ್ತು ತಂತ್ರಜ್ಞಾನದ ಕುರಿತು ವಿವರವಾಗಿ ತಾಂತ್ರಿಕ ಉಪನ್ಯಾಸ ನೀಡಿದರು. ರಸ್ತೆಯ ಸುಸ್ಥಿರತೆ ಮತ್ತು ಬಾಳಿಕೆಗಾಗಿ ಕಾಂಕ್ರೀಟ್ ನ ಗುಣಮಟ್ಟ, ನಿರ್ಮಾಣದ ವಿಧಾನ, ಒಳಚರಂಡಿ ಇತ್ಯಾದಿ ಅಂಶಗಳಿಗೆ ಒತ್ತು ನೀಡಬೇಕು. ಆರಂಭಿಕ ಹೂಡಿಕೆಗಳು ಸ್ವಲ್ಪಮಟ್ಟಿಗೆ ಹೆಚ್ಚಿದ್ದರೂ ಸಹ, ವೈಟ್ ಟಾಪಿಂಗ್ ರಸ್ತೆಗಳಿಂದ ಅನಾಹುತ ತಪ್ಪಿಸಬಹುದು ಎಂದರು.
ಕರ್ನಾಟಕ ಹಿರಿಯ ಎಂಜಿನಿಯರ್ಗಳ ವೇದಿಕೆಯು ವ್ಯಾಪಕ ಶ್ರೇಣಿಯ ಅನುಭವ ಮತ್ತು ಪರಿಣತಿಯನ್ನು ಹೊಂದಿರುವ ವೃತ್ತಿಪರರನ್ನು ಒಳಗೊಂಡಿರುವ ಎಂಜಿನಿಯರಿಂಗ್ ಸಂಸ್ಥೆಯಾಗಿದೆ ಮತ್ತು ಇದು ತಾಂತ್ರಿಕ ಜ್ಞಾನವನ್ನು ಉತ್ತೇಜಿಸಲು ಮತ್ತು ರಾಜ್ಯದ ಅಭಿವೃದ್ಧಿ ಕಾರ್ಯಗಳಲ್ಲಿ ಸಾರ್ವಜನಿಕರಿಗೆ ತಾಂತ್ರಿಕ ಸೇವೆಗಳನ್ನು ನೀಡಲು ಉದ್ದೇಶಿಸಿದೆ.