Home ಟಾಪ್ ಸುದ್ದಿಗಳು ರೋಹಿಂಗ್ಯಾಗಳಿಗೆ ಕರ್ನಾಟಕ ಪೊಲೀಸರು ಆಶ್ರಯ ಕಲ್ಪಿಸಿಲ್ಲ, ನ್ಯಾಯಾಲಯದ ಆದೇಶಕ್ಕೆ ಸರ್ಕಾರ ಬದ್ಧ: ಸುಪ್ರೀಂಗೆ ವಿವರಣೆ

ರೋಹಿಂಗ್ಯಾಗಳಿಗೆ ಕರ್ನಾಟಕ ಪೊಲೀಸರು ಆಶ್ರಯ ಕಲ್ಪಿಸಿಲ್ಲ, ನ್ಯಾಯಾಲಯದ ಆದೇಶಕ್ಕೆ ಸರ್ಕಾರ ಬದ್ಧ: ಸುಪ್ರೀಂಗೆ ವಿವರಣೆ

►ರೋಹಿಂಗ್ಯಾರನ್ನು ಗಡಿಪಾರು ಮಾಡುವ ಉದ್ದೇಶ ಇಲ್ಲ ಎಂದಿದ್ದ ರಾಜ್ಯ ಸರ್ಕಾರ

ಬೆಂಗಳೂರು: ರಾಜ್ಯದಲ್ಲಿ 126 ರೋಹಿಂಗ್ಯಾ ವಲಸಿಗರು ಪತ್ತೆ ಹಚ್ಚಲಾಗಿದ್ದು, ಅವರನ್ನು ಯಾವುದೇ ಶಿಬಿರ ಅಥವಾ ಬಂಧನ ಕೇಂದ್ರದಲ್ಲಿ ರಾಜ್ಯ ಪೊಲೀಸರು ಇಟ್ಟಿಲ್ಲ ಎಂದು ಸುಪ್ರೀಂ ಕೋರ್ಟ್‌ಗೆ ರಾಜ್ಯ ಸರ್ಕಾರ ತಿಳಿಸಿದೆ.


ಕರ್ನಾಟಕದಲ್ಲಿ ನೆಲೆಸಿರುವ 72 ರೋಹಿಂಗ್ಯಾ ವಲಸಿಗರನ್ನು ಗಡಿಪಾರು ಮಾಡುವ ಉದ್ದೇಶ ರಾಜ್ಯ ಸರ್ಕಾರಕ್ಕೆ ಇಲ್ಲ ಎಂದು ಹಿಂದೆ ಸುಪ್ರೀಂ ಕೋರ್ಟ್‌ಗೆ ರಾಜ್ಯ ಸರ್ಕಾರ ತಿಳಿಸಿತ್ತು.
ಒಂದು ವರ್ಷದೊಳಗೆ ಬಾಂಗ್ಲಾದೇಶಿಗರು, ರೋಹಿಂಗ್ಯಾಗಳು, ಕಾನೂನುಬಾಹಿರ ವಲಸಿಗರು ಮತ್ತು ನುಸುಳುಕೋರರನ್ನು ಗುರುತಿಸಿ ಅವರನ್ನು ಬಂಧಿಸುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿರುವಂತೆ ಕೋರಿ ಬಿಜೆಪಿ ಮುಖಂಡ ಅಶ್ವಿನಿ ಉಪಾಧ್ಯಾಯ ಸಲ್ಲಿಸಿದ್ದ ಮನವಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಪ್ರತಿಕ್ರಿಯೆ ದಾಖಲಿಸಿದೆ.


ಇದಕ್ಕೂ ಮುನ್ನ ಉಪಾಧ್ಯಾಯ ಅವರ ಮನವಿಯು ನಿರ್ವಹಣೆಗೆ ಅರ್ಹವಾಗಿಲ್ಲ ಎಂದು ಕರ್ನಾಟಕ ಸರ್ಕಾರ ತಗಾದೆ ಎತ್ತಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿ ಅಫಿದವಿಟ್‌ ಸಲ್ಲಿಸಿರುವ ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್‌ ಹೊರಡಿಸುವ ಆದೇಶಕ್ಕೆ ಬದ್ಧವಾಗಿರುವುದಾಗಿ ತಿಳಿಸಿದೆ.


“ತನ್ನ ವ್ಯಾಪ್ತಿಗೆ ಒಳಪಡುವ ಯಾವುದೇ ಶಿಬಿರ ಅಥವಾ ಬಂಧನ ಕೇಂದ್ರದಲ್ಲಿ ರೋಹಿಂಗ್ಯಾಗಳಿಗೆ ಕರ್ನಾಟಕ ಪೊಲೀಸರು ನೆಲೆ ಕಲ್ಪಿಸಿಲ್ಲ. ರಾಜ್ಯ ಸರ್ಕಾರವು 126 ರೋಹಿಂಗ್ಯಾಗಳನ್ನು ಪತ್ತೆ ಹಚ್ಚಿದ್ದು, ಈ ಸಂಬಂಧ ಸುಪ್ರೀಂ ಕೋರ್ಟ್‌ ಆದೇಶವನ್ನು ಚಾಚೂ ತಪ್ಪದೆ ಪಾಲಿಸಲಾಗುವುದು” ಎಂದು ಗೃಹ ಇಲಾಖೆಯ ಅಧೀನ ಕಾರ್ಯದರ್ಶಿ ವನಜಾ ಕೆ ಎನ್‌ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ.
ಅಗತ್ಯವೆನಿಸಿದರೆ ಮುಂದಿನ ಹಂತದಲ್ಲಿ ವಿಸ್ತೃತವಾದ ಅಫಿಡವಿಟ್‌ ಸಲ್ಲಿಸಲು ಸ್ವಾತಂತ್ರ್ಯ ಕಲ್ಪಿಸಬೇಕು ಎಂದು ರಾಜ್ಯ ಸರ್ಕಾರವು ನ್ಯಾಯಾಲಯಕ್ಕೆ ಕೋರಿದೆ.

Join Whatsapp
Exit mobile version