ಬೆಂಗಳೂರು: ಬೆಳಗಾವಿ ಗಡಿ ವಿವಾದದ ವಿಚಾರಣೆ ಸುಪ್ರೀಂಕೋರ್ಟ್‌ನಲ್ಲಿ ಇಂದು (ನ.23) ನಡೆಯಲಿದೆ.
2004ರಲ್ಲಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ 18 ವರ್ಷಗಳ ಬಳಿಕ ಇಂದು (ನ.23) ನಡೆಯಲಿದ್ದು, ಬೆಳಗಾವಿ, ಬೀದರ್, ಬಾಲ್ಕಿ ಸೇರಿದಂತೆ ಕರ್ನಾಟಕದ ಗಡಿಯಲ್ಲಿರುವ 865 ಹಳ್ಳಿಗಳು ತಮಗೆ ಸೇರಬೇಕು ಎಂದು ಸುಪ್ರೀಂ ಕೋರ್ಟ್‌ನಲ್ಲಿ ಮಹಾರಾಷ್ಟ್ರ ಸರ್ಕಾರ ವಾದಿಸುತ್ತಿದೆ. 1956ರ ರಾಜ್ಯ ಪುನರ್ ವಿಂಗಡಣಾ ಕಾಯ್ದೆಯನ್ನು ಪ್ರಶ್ನಿಸಿ ಮಹಾರಾಷ್ಟ್ರ ಸರ್ಕಾರ ಸುಪ್ರೀಂಕೋರ್ಟ್ ಮೊರೆ ಹೋಗಿದೆ.
ಕರ್ನಾಟಕದ ಪರ ತೀರ್ಪು ಬರುವಂತೆ ನಮ್ಮ ವಕೀಲರ ತಂಡವನ್ನು ಸಿದ್ಧಗೊಳಿಸಲಾಗಿದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ. ತಂಡದಲ್ಲಿ ಹಿರಿಯ ವಕೀಲರಾದ ಮುಕುಲ್ ರೋಹಟಗಿ, ಶ್ಯಾಮ್ ದಿವಾನ್, ಉದಯ್ ಹೊಳ್ಳಾ, ಮಾರುತಿ ಜಿರ್ಲೆ ಇದ್ದಾರೆ.