ಹೊಸದಿಲ್ಲಿ : ಇದುವರೆಗೆ ಮೂರು ಬಾರಿ ಬಿಜೆಪಿ ಅಧ್ಯಕ್ಷರಾಗಿರುವ ಜೆ.ಪಿ.ನಡ್ಡಾ ಅವರ ಅವಧಿಯನ್ನು ವಿಸ್ತರಿಸಲಾಗಿತ್ತು.
ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಇನ್ನೊಬ್ಬರ ಆಯ್ಕೆ ನಿಶ್ಚಿತ ಎನ್ನುವ ಕಾರಣಕ್ಕಾಗಿಯೇ , ನಡ್ಡಾ ಅವರನ್ನು ರಾಜ್ಯಸಭಾ ಸದಸ್ಯರನ್ನಾಗಿ ಮಾಡಿ, ಕೇಂದ್ರದಲ್ಲಿ ಆರೋಗ್ಯ ಇಲಾಖೆಯ ಸಚಿವರನ್ನಾಗಿ ಮಾಡಲಾಗಿತ್ತು. ಇದರ ಬೆನ್ನಲ್ಲೇ, ಅಧ್ಯಕ್ಷ ಸ್ಥಾನಕ್ಕೆ ಮೂವರ ಹೆಸರು ಓಡಾಡುತ್ತಿತ್ತು. ಆದರೆ, ಹಲವು ರಾಜ್ಯಗಳ ವಿಧಾನಸಭಾ ಚುನಾವಣೆ ಮತ್ತು ಆರ್ ಎಸ್ ಎಸ್ ಸಂಘದ ಹಿರಿಯರ ಜೊತೆಗೆ, ಒಮ್ಮತ ಮೂಡದ ಹಿನ್ನಲೆಯಲ್ಲಿ, ಅಧ್ಯಕ್ಷರ ಆಯ್ಕೆ ನೆನೆಗುದಿಗೆ ಬಿದ್ದಿತ್ತು. ಹಾಗಾಗಿ, ನಡ್ಡಾ ಅವರು ಎರಡು ಹುದ್ದೆಗಳನ್ನು ನಿಭಾಯಿಸುತ್ತಿದ್ದಾರೆ.
ಈಗ, ಅಧ್ಯಕ್ಷರನ್ನು ಆಯ್ಕೆ ಮಾಡುವ ಪ್ರಕ್ರಿಯೆ ಆರಂಭವಾಗಿದೆ. ಸಂಘ ಪರಿವಾರದ ಜೊತೆಗೆ ಉತ್ತಮ ಬಾಂಧವ್ಯವನ್ನು ಇಟ್ಟುಕೊಂಡವರನ್ನು ಆಯ್ಕೆ ಮಾಡಲು ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ನಿರ್ಧರಿಸಿದ್ದಾರೆ ಎನ್ನುವ ಮಾಹಿತಿಯಿದೆ. ಆ ನಿಟ್ಟಿನಲ್ಲಿ, ನಾಲ್ವರ ಹೆಸರು ಸದ್ಯ ರೇಸಿನಲ್ಲಿದೆ.
ಕರ್ನಾಟಕದ ಉಡುಪಿ ಮೂಲದ ಮತ್ತು ಹಾಲೀ ಬಿಜೆಪಿಯ ಸಂಘಟನಾತ್ಮಕ ರಾಷ್ಟ್ರೀಯ ಕಾರ್ಯದರ್ಶಿಯಾಗಿರುವ ಬಿ.ಎಲ್.ಸಂತೋಷ್ ಅವರ ಹೆಸರು, ರೇಸಿನಲ್ಲಿರುವ ನಾಲ್ವರ ಪೈಕಿ ಒಬ್ಬರದ್ದು. ಮಹಾರಾಷ್ಟ್ರ ಮತ್ತು ಜಾರ್ಖಂಡ್ ಅಸೆಂಬ್ಲಿ ಚುನಾವಣೆ ಮುಗಿದ ನಂತರ, ಹೊಸ ಅಧ್ಯಕ್ಷರ ಘೋಷಣೆಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಹೋದ ವರ್ಷ ನಡೆದ ಕರ್ನಾಟಕ ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿ ಕಳಪೆ ಪ್ರದರ್ಶನವನ್ನು ನೀಡಿತ್ತು. ಇದಾದ ನಂತರ, ಪ್ರಧಾನಿ ಮೋದಿ ಮತ್ತು ಬಿ.ಎಲ್.ಸಂತೋಷ್ ನಡುವಿನ ಬಾಂಧವ್ಯ ಅಷ್ಟಕಷ್ಟೇ ಎಂದು ಹೇಳಲಾಗುತ್ತಿದೆ. ಆದರೂ, ಅಮಿತ್ ಶಾ ಅವರ ವಿಶ್ವಾಸವನ್ನು ಉಳಿಸಿಕೊಂಡಿರುವ ಸಂತೋಷ್ ಮುಂದಿನ ಅಧ್ಯಕ್ಷರಾಗಬಹುದು ಎನ್ನುವ ಮಾತು ಕೇಳಿ ಬರುತ್ತಿದೆ.
ಬಿ.ಎಲ್. ಸಂತೋಷ್ ಒಬ್ಬರದೇ ಅಲ್ಲದೇ, ಕೇಂದ್ರ ಸಚಿವರಾದ ಧರ್ಮೇಂದ್ರ ಪ್ರಧಾನ್,ಭೂಪೇಂದ್ರ ಯಾದವ್ ಮತ್ತು ಮಹಾರಾಷ್ಟ್ರದ ವಿನೋದ್ ಥಾವಡೆ ಹೆಸರುಗಳು ಕೂಡಾ ರೇಸಿನಲ್ಲಿವೆ. ಆದರೆ, ಈ ನಾಲ್ವರ ಪೈಕಿ, ಸಂಘಕ್ಕೆ ಆಪ್ತರಾಗಿರುವ ಸಂತೋಷ್ ಹೆಸರು ಅಂತಿಮಗೊಳ್ಳಬಹುದು ಎನ್ನುವ ಮಾತು ಕೇಳಿ ಬರುತ್ತಿದೆ.