Home ಟಾಪ್ ಸುದ್ದಿಗಳು ಶಿರೂರು ಮಠಕ್ಕೆ ಬಾಲ ಸನ್ಯಾಸಿ ಪೀಠಾಧಿಪತಿ ಮಾಡಿರುವುದನ್ನು ಎತ್ತಿ ಹಿಡಿದ ಕರ್ನಾಟಕ ಹೈಕೋರ್ಟ್

ಶಿರೂರು ಮಠಕ್ಕೆ ಬಾಲ ಸನ್ಯಾಸಿ ಪೀಠಾಧಿಪತಿ ಮಾಡಿರುವುದನ್ನು ಎತ್ತಿ ಹಿಡಿದ ಕರ್ನಾಟಕ ಹೈಕೋರ್ಟ್

ಬೆಂಗಳೂರು: ಉಡುಪಿಯ ಶ್ರೀಕೃಷ್ಣ ಮಠದ ಅಷ್ಟಮಠಗಳ ಪೈಕಿ ಒಂದಾಗಿರುವ ಶಿರೂರು ಮಠಕ್ಕೆ ಬಾಲ ಸನ್ಯಾಸಿ ನೇಮಕ ಮಾಡಿರುವುದನ್ನು ಬುಧವಾರ ಎತ್ತಿಹಿಡಿದಿರುವ ಕರ್ನಾಟಕ ಹೈಕೋರ್ಟ್, ಅಪ್ರಾಪ್ತರು ಸ್ವಾಮಿಯಾಗಬಾರದು ಎಂಬುದಕ್ಕೆ ಕಾನೂನಿನ ತೊಡಕು ಇಲ್ಲ ಎಂದು ಮಹತ್ವದ ತೀರ್ಪು ಪ್ರಕಟಿಸಿದೆ.

ಶಿರೂರು ಮಠದ ಪೀಠಾಧಿಪತಿಯನ್ನಾಗಿ 16 ವರ್ಷದ ಅನಿರುದ್ಧ ಸರಳತ್ತಾಯ (ಈಗ ವೇದವರ್ಧನ ತೀರ್ಥ) ಅವರನ್ನು ನೇಮಕ ಮಾಡಿದ್ದರ ಸಿಂಧುತ್ವ ಪ್ರಶ್ನಿಸಿ ಶಿರೂರು ಮಠದ ಭಕ್ತ ಸಮಿತಿಯ ಕಾರ್ಯದರ್ಶಿ ಪಿ. ಲಾತವ್ಯ ಆಚಾರ್ಯ ಸೇರಿ ನಾಲ್ವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿಗೆ ಸಂಬಂಧಿಸಿದಂತೆ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ನೇತೃತ್ವದ ವಿಭಾಗೀಯ ಪೀಠವು ತೀರ್ಪು ನೀಡಿದೆ.

“ಬೌದ್ಧ ಧರ್ಮದಲ್ಲಿ ಅತ್ಯಂತ ಚಿಕ್ಕ ವಯಸ್ಸಿಗೆ ಮಕ್ಕಳು ಭಿಕ್ಕುಗಳಾಗುತ್ತಾರೆ. ಯಾವ ವಯಸ್ಸಿನಲ್ಲಿ ಸನ್ಯಾಸಿಯಾಗಬೇಕು ಎಂಬುದಕ್ಕೆ ಸಂಬಂಧಿಸಿದಂತೆ ಯಾವುದೇ ನಿಯಮವಿಲ್ಲ. 18 ವರ್ಷಕ್ಕಿಂತ ಚಿಕ್ಕವರು ಸನ್ಯಾಸಿಗಳಾಗಬಾರದು ಎಂಬುದಕ್ಕೆ ಸಂಬಂಧಿಸಿದಂತೆ ಯಾವುದೇ ಶಾಸನಬದ್ಧ ಕಾನೂನು ಇಲ್ಲ. 18 ವರ್ಷವಾಗುವುದಕ್ಕೂ ಮುಂಚಿತವಾಗಿ ಸನ್ಯಾಸಿಯಾಗಲು ಧರ್ಮದಲ್ಲಿ ಅವಕಾಶವಿದೆ ಎಂಬುದನ್ನು ಅಮಿಕಸ್ ಕ್ಯೂರಿ ಎಸ್ ಎಸ್ ನಾಗಾನಂದ್ ಅವರು ವಿಸ್ತೃತವಾಗಿ ವಿವರಿಸಿದ್ದಾರೆ. ಹೀಗಾಗಿ, ಅದಕ್ಕೆ ಯಾವುದೇ ನಿರ್ಬಂಧವಿಲ್ಲ. ಪ್ರಮುಖವಾದ ಧಾರ್ಮಿಕ ಚಟುವಟಿಕೆಗಳ ದೃಷ್ಟಿಯಿಂದ ಶಿರೂರುಮಠಕ್ಕೆ ಪೀಠಾಧಿಪತಿ ನೇಮಕ ಮಾಡುವ ಅಧಿಕಾರ ಸೋದೆ ವಾದಿರಾಜ ಮಠದ ಪೀಠಾಧಿಪತಿಗೆ ಇದೆ. ಈ ವಿಚಾರದಲ್ಲಿ ನ್ಯಾಯಾಲಯವು ಮಧ್ಯಪ್ರವೇಶಿಸಲಾಗದು. ಆದಾಗ್ಯೂ, ಧಾರ್ಮಿಕ ವಿಧಿವಿಧಾನ ಮತ್ತು ಧರ್ಮದಲ್ಲಿ ಅಸ್ತಿತ್ವದಲ್ಲಿರುವ ನಂಬಿಕೆಗಳು ಎಲ್ಲಿಯವರೆಗೆ ವ್ಯಕ್ತಿಯ ಸಾಂವಿಧಾನಿಕ ಹಕ್ಕುಗಳನ್ನು ಉಲ್ಲಂಘಿಸುವುದಿಲ್ಲವೋ ಅಲ್ಲಿಯವರೆಗೆ ಅವುಗಳನ್ನು ಪಾಲಿಸುವ ಹೊಣೆಗಾರಿಕೆ ಇದೆ” ಎಂದು ಪೀಠವು ಆದೇಶದಲ್ಲಿ ಹೇಳಿದೆ.

“ಹಾಲಿ ಪ್ರಕರಣದಲ್ಲಿ ಬಹುಮಖ್ಯ ಧಾರ್ಮಿಕ ನಂಬಿಕೆಗಳ ಪ್ರಕಾರ ಶಿರೂರು ಮಠವು ಧಾರ್ಮಿಕ ವರ್ಗವಾಗಿದ್ದು, ಏಳನೇ ಪ್ರತಿವಾದಿಯಾದ ಅನಿರುದ್ಧ ಸರಳತ್ತಾಯ ಅವರು ಸನ್ಯಾಸಿಯಾಗಿದ್ದಾರೆ. ಅವರನ್ನು ಶಿರೂರು ಮಠದ ಪೀಠಾಧಿಪತಿಯಾಗಿ ನೇಮಿಸಲಾಗಿದೆ. ಹೀಗಿರುವಾಗ ಮಠದ ಬಹುಮುಖ್ಯ ಧಾರ್ಮಿಕ ನಂಬಿಕೆಗಳು ಸಾಂವಿಧಾನಿಕ ಹಕ್ಕುಗಳನ್ನು ಉಲ್ಲಂಘಿಸಿವೆ ಎಂದು ಊಹಿಸಿಕೊಳ್ಳಲಾಗದು” ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.

Join Whatsapp
Exit mobile version