Home ಟಾಪ್ ಸುದ್ದಿಗಳು ಲಸಿಕೆ ವಿಚಾರದಲ್ಲಿ ಜನರಿಗೆ ಸುಳ್ಳು ಭರವಸೆ ನೀಡಬೇಡಿ : ಸರಕಾರಕ್ಕೆ ಹೈಕೋರ್ಟ್ ತರಾಟೆ

ಲಸಿಕೆ ವಿಚಾರದಲ್ಲಿ ಜನರಿಗೆ ಸುಳ್ಳು ಭರವಸೆ ನೀಡಬೇಡಿ : ಸರಕಾರಕ್ಕೆ ಹೈಕೋರ್ಟ್ ತರಾಟೆ

ಬೆಂಗಳೂರು: ಕೋವಿಡ್ ನಿರ್ವಹಣೆಯಲ್ಲಿ ಉಂಟಾಗಿರುವ ಸಮಸ್ಯೆಗಳ ಬಗ್ಗೆ ಸ್ವಯಂಪ್ರೇರಿತ ಪ್ರಕರಣದ ವಿಚಾರಣೆ ನಡೆಸಿದ ರಾಜ್ಯ ಹೈಕೋರ್ಟ್ ಸರಕಾರವನ್ನು ಮತ್ತೆ ತರಾಟೆಗೆ ತೆಗೆದುಕೊಂಡಿತು. ಕೊರೊನಾ ಲಸಿಕೆ ವಿಚಾರದಲ್ಲಿ ಸರಕಾರ ಸತ್ಯಾಂಶವನ್ನು ಜನರ ಮುಂದಿಡುತ್ತಿಲ್ಲವೇಕೆ ಎಂದು ಹೈಕೋರ್ಟ್ ಪ್ರಶ್ನಿಸಿದೆ.

ಈ ಕುರಿತು ಸರಕಾರದ ಅಡ್ವಕೇಟ್ ಜನರಲ್ ರನ್ನು ಪ್ರಶ್ನಿಸಿದ ಮುಖ್ಯ ನ್ಯಾಯಮೂರ್ತಿಗಳು, ನೀವೇಕೆ ಜನರ ಮುಂದೆ ಹೋಗಿ ಲಸಿಕೆ ಅಲಭ್ಯತೆ ಕುರಿತು ಹೇಳಿಕೆ ನೀಡಬಾರದು. ಆಗಲಾದರೂ ಜನ ಲಸಿಕಾ ಕೇಂದ್ರಗಳಿಗೆ ಬಂದು ನಿರಾಸೆಯಿಂದ ವಾಪಾಸ್ ತೆರಳುವುದು ತಪ್ಪುತ್ತದೆ ಎಂದರು. ಅಲ್ಲದೇ, ಸರಕಾರ ಹೇಗೆ ನಡೆಸಬೇಕು ಅನ್ನೋದನ್ನು ನಾವು ಹೇಳಲಾರೆವು, ಬದಲಿಗೆ ಕೋವಿಡ್ ಪರಿಸ್ಥಿತಿಯಲ್ಲಿ ಆಗುತ್ತಿರುವ ಸಾಂವಿಧಾನಿಕ ಹಕ್ಕುಗಳ ಉಲ್ಲಂಘನೆ ಬಗ್ಗೆಯಷ್ಟೇ ಪ್ರಶ್ನಿಸುತ್ತಿದ್ದೇವೆ ಎಂದು ಪೀಠ ಸ್ಪಷ್ಟೀಕರಿಸಿತು.

ಕೋವಿಡ್ ಲಸಿಕೆ ಅಲಭ್ಯತೆ ಬಗ್ಗೆಯೇ ಹೆಚ್ಚು ಒತ್ತು ನೀಡಿದ ಪೀಠವು, 60 ವರ್ಷ ಮೇಲ್ಪಟ್ಟವರಿಗೆ ಎರಡನೇ ಡೋಸ್ ಅಲಭ್ಯತೆ ಇರುವ ಸಮಯದಲ್ಲಿ, 45 ವರ್ಷ ಮೇಲ್ಪಟ್ಟವರಿಗೆ ಡೋಸ್ ನೀಡಬಹುದೇ? ಎಂದು ಪ್ರಶ್ನಿಸಿದ ನ್ಯಾಯಾಲಯವು ಇದು ಕೇವಲ ನಾಗರಿಕರ ಆರೋಗ್ಯ ಹಕ್ಕಿನ ಕುರಿತ ಪ್ರಶ್ನೆ ಮಾತ್ರವಲ್ಲ, ಸಂವಿಧಾನದ 14ನೇ ವಿಧಿಯ ಉಲ್ಲಂಘನೆಯ ಪ್ರಶ್ನೆಯೂ ಆಗಿದೆ ಎಂದಿದೆ. ಆದ್ದರಿಂದ ರಾಜ್ಯ ಸರಕಾರ ಲಸಿಕೆ ಕುರಿತಾದ ನ್ಯಾಯ ಸಮ್ಮತವಾದ ನೀತಿ ರೂಪಿಸಿ ಮಂಗಳವಾರ ಅದನ್ನು ನ್ಯಾಯಾಲಯದ ಮುಂದಿಡುವಂತೆ ತಿಳಿಸಿತು. ಅಲ್ಲದೇ, ಈ ಸನ್ನಿವೇಶದಲ್ಲಿ ಖಾಸಗಿ ಸಂಸ್ಥೆಗಳು ಮೊದಲ ಡೋಸ್ ನೀಡಬಹುದೇ ಅನ್ನೋದನ್ನು ಕೇಂದ್ರ ಸರಕಾರ ತಿಳಿಸಲಿ ಎಂದಿದೆ.

ಗ್ರಾಮೀಣ ಭಾಗದಲ್ಲಿ ಆರ್ಟಿ-ಪಿಸಿಆರ್ ಪರೀಕ್ಷೆ ಸರಕಾರದ ಮೊದಲ ಆದ್ಯತೆ ಆಗಬೇಕಿದ್ದು, ಈ ಬಗ್ಗೆ ನ್ಯಾಯಾಲಯಕ್ಕೆ ಪ್ರತಿಕ್ರಿಯಿಸುವಂತೆಯೂ ರಾಜ್ಯ ಸರಕಾರಕ್ಕೆ ಆದೇಶಿಸಿದೆ. ಲಸಿಕೆ ಕೊರತೆ ವ್ಯಾಪಕವಾಗಿರುವ ಕುರಿತು ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ನೋಟಿಸ್ ನೀಡಿ ಉತ್ತರಿಸುವಂತೆಯೂ ಹೇಳಿದೆ.

ಮೊದಲನೇ ಡೋಸ್ ತೆಗೆದುಕೊಂಡವರಿಗೆ ಎರಡನೇ ಡೋಸ್ ಸಿಗದೇ ಹೋದರೆ ಅದು ರಾಷ್ಟ್ರೀಯ ಪೋಲಾಗುವುದಿಲ್ಲವೇ ಎಂದು ನ್ಯಾಯಲಯವು ಪ್ರಶ್ನೆ ಮಾಡಿದೆ. ಈ ನಿಟ್ಟಿನಲ್ಲಿ ಸರಕಾರ ತಾನೇ ನೀಡಿದ 12-16 ವಾರಗಳ ಅಂತರದ ಲಸಿಕೆ ನೀತಿಯನ್ನ ಪಾಲಿಸಲಿ ಎಂದಿತು. ಇನ್ನು ಚಾಮರಾಜನಗರ ಆಕ್ಸಿಜನ್ ದುರಂತದಲ್ಲಿ ಮೃತರಾದವರಿಗೆ ಸರಕಾರ 2 ಲಕ್ಷ ರೂ. ಪರಿಹಾರ ನೀಡುವುದಾಗಿ ಅಡ್ವಕೇಟ್ ಜನರಲ್ ಪ್ರಭುಲಿಂಗ ನಾವಡಗಿ ಪೀಠಕ್ಕೆ ಮಾಹಿತಿ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಧೀಶರು, “ಪರಿಹಾರ ಮೊತ್ತದ ಬಗ್ಗೆ ನಾವು ಚರ್ಚಿಸುವುದಿಲ್ಲ. ಆದರೆ ಪರಿಹಾರ ಮೊತ್ತ ತುರ್ತಾಗಿ ಸಂತ್ರಸ್ತ ಕುಟುಂಬವನ್ನ ತಲುಪುವಂತಾಗಲಿ” ಎಂದಿದೆ.

Join Whatsapp
Exit mobile version