Home ಟಾಪ್ ಸುದ್ದಿಗಳು ಹಿಜಾಬ್ ನಿಷೇಧ: ಕರ್ನಾಟಕ ಹೈಕೋರ್ಟ್ ನ ತೀರ್ಪು ಧಾರ್ಮಿಕ ಸ್ವಾತಂತ್ರ್ಯದ ಉಲ್ಲಂಘನೆ; ಅಮೆರಿಕ ಸಂಸ್ಥೆ ಕಳವಳ

ಹಿಜಾಬ್ ನಿಷೇಧ: ಕರ್ನಾಟಕ ಹೈಕೋರ್ಟ್ ನ ತೀರ್ಪು ಧಾರ್ಮಿಕ ಸ್ವಾತಂತ್ರ್ಯದ ಉಲ್ಲಂಘನೆ; ಅಮೆರಿಕ ಸಂಸ್ಥೆ ಕಳವಳ

ವಾಷಿಂಗ್ಟನ್: ಕರ್ನಾಟಕದ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಮೇಲಿನ ನಿಷೇಧವನ್ನು ಎತ್ತಿಹಿಡಿದಿರುವ ಹೈಕೋರ್ಟ್ ನ ತೀರ್ಪು ಧಾರ್ಮಿಕ ಸ್ವಾತಂತ್ರ್ಯದ ಸ್ಪಷ್ಟವಾದ ಉಲ್ಲಂಘನೆಯಾಗಿದೆ ಎಂದು ಯುನೈಟೆಡ್ ಸ್ಟೇಟ್ಸ್ ಕಮಿಷನ್ ಆನ್ ಇಂಟರ್ನ್ಯಾಷನಲ್ ರಿಲಿಜಿಯಸ್ ಫ್ರೀಡಮ್ ಸಂಸ್ಥೆ ತಿಳಿಸಿದೆ.

ಕರ್ನಾಟಕ ಹೈಕೋರ್ಟ್ ನ ತೀರ್ಪು, ತಮ್ಮ ನಂಬಿಕೆಯ ಅನುಗುಣವಾಗಿ ಶಿಕ್ಷಣವನ್ನು ಬಯಸುವ ಮಹಿಳೆಯರಿಗೆ ಮತ್ತು ವಿದ್ಯಾರ್ಥಿನಿಯರಿಗೆ ಮಾಡಿದ ಗಂಭೀರ ಅನ್ಯಾಯ ಮತ್ತು ಅವಮಾನವಾಗಿದೆ ಎಂದು ಸಮಿತಿಯ ಆಯುಕ್ತರಾದ ಅನುರಿಮಾ ಭಾರ್ಗವ ತಿಳಿಸಿದ್ದಾರೆ.

ಯುನೈಟೆಡ್ ಸ್ಟೇಟ್ಸ್ ಕಮಿಷನ್ ಆನ್ ಇಂಟರ್ನ್ಯಾಷನಲ್ ರಿಲಿಜಿಯಸ್ ಫ್ರೀಡಮ್ ಎಂಬ ಸಂಸ್ಥೆಯು ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯವನ್ನು ಕಾಪಾಡಲು 1988 ರಲ್ಲಿ ರಚಿಸಲ್ಪಟ್ಟ ಕಾಯ್ದೆಯಾಗಿದೆ ಮತ್ತು ಇದು ಧಾರ್ಮಿಕ ಸ್ವಾತಂತ್ರ್ಯದ ಸಾರ್ವತ್ರಿಕ ಹಕ್ಕನ್ನು ಮೇಲ್ವಿಚಾರಣೆ ನಿರ್ವಹಿಸುತ್ತದೆ ಎಂಬುದು ವಿಶೇಷ.

ಸದ್ಯ ಭಾರತದಲ್ಲಿ ಫ್ಯಾಶಿಸ್ಟ್ ವರ್ಗದಿಂದ ನಡೆಯುತ್ತಿರುವ ಧಾರ್ಮಿಕ ಸ್ವಾತಂತ್ರ್ಯದ ಉಲ್ಲಂಘನೆಯನ್ನು ಈ ಸಂಸ್ಥೆ ಕಟು ಶಬ್ದಗಳಿಂದ ಟೀಕಿಸಿದೆ.
ಕರ್ನಾಟಕದ ಶಿಕ್ಷಣ ಸಂಸ್ಥೆಗಳಿಲ್ಲಿ ಮುಸ್ಲಿಮ್ ವಿದ್ಯಾರ್ಥಿಯರು ಹಿಜಾಬ್ ಧರಿಸುವುದನ್ನು ನಿಷೇಧಿಸಿದ ರಾಜ್ಯ ಸರ್ಕಾರದ ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿದಿತ್ತು.

ಹಿಜಾಬ್ ಇಸ್ಲಾಂ ನ ಅವಿಭಾಜ್ಯ ಅಂಗವಲ್ಲ ಮತ್ತು ಸಂವಿಧಾನದ 25ನೇ ವಿಧಿಯ ವ್ಯಾಪ್ತಿಗೊಳಪಟ್ಟಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ತಿ, ನ್ಯಾಯಮೂರ್ತಿಗಳಾದ ಕೃಷ್ಣ ಎಸ್. ದೀಕ್ಷಿತ್, ಜೆ.ಎಂ.ಖಾಝಿ ಅವರನ್ನೊಳಗೊಂಡ ಪೀಠ ಆದೇಶ ನೀಡಿತ್ತು.
ಮಾತ್ರವಲ್ಲ ಹಿಜಾಬ್ ಧರಿಸಿ ತರಗತಿ ಪ್ರವೇಶಕ್ಕೆ ಅನುಮತಿ ಕೋರಿ ಸಂತ್ರಸ್ತ ಮುಸ್ಲಿಮ್ ವಿದ್ಯಾರ್ಥಿನಿಯರು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿತ್ತು.

ಈ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಮುಸ್ಲಿಂ ವಿದ್ಯಾರ್ಥಿಗಳು ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿಷೇಧವನ್ನು ವಿರೋಧಿಸಿ ಪ್ರತಿಭಟಿಸುತ್ತಿದ್ದಾರೆ. ಕರ್ನಾಟಕ ಸರ್ಕಾರದ ಇಸ್ಲಾಮೋಫೋಬಿಕ್ ಕ್ರಮವು ಭಾರತದ ಸಂವಿಧಾನದ ಅಡಿಯಲ್ಲಿ ಖಾತರಿಪಡಿಸಿದ ಧಾರ್ಮಿಕ ಸ್ವಾತಂತ್ರ್ಯವನ್ನು ಉಲ್ಲಂಘಿಸುತ್ತದೆ ಎಂದು ಸಂತ್ರಸ್ತ ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

Join Whatsapp
Exit mobile version