Home ಕರಾವಳಿ ಸಂವಿಧಾನ ನೀಡಿದ ಹಕ್ಕು ಕಸಿದುಕೊಂಡ ಕರ್ನಾಟಕ ಹೈಕೋರ್ಟ್ ತೀರ್ಪು: ನ್ಯಾಷನಲ್ ವುಮೆನ್ಸ್ ಫ್ರಂಟ್

ಸಂವಿಧಾನ ನೀಡಿದ ಹಕ್ಕು ಕಸಿದುಕೊಂಡ ಕರ್ನಾಟಕ ಹೈಕೋರ್ಟ್ ತೀರ್ಪು: ನ್ಯಾಷನಲ್ ವುಮೆನ್ಸ್ ಫ್ರಂಟ್

ಮಂಗಳೂರು: ಹಿಜಾಬ್ ಕುರಿತ ಹೈಕೋರ್ಟ್ ತೀರ್ಪು ಸಂವಿಧಾನ ನಮಗೆ ಕೊಟ್ಟ ಹಕ್ಕನ್ನು ಮೊಟಕುಗೊಳಿಸಿದೆ ಎಂದು ನ್ಯಾಷನಲ್ ವುಮೆನ್ಸ್ ಫ್ರಂಟ್ ರಾಜ್ಯಾಧ್ಯಕ್ಷೆ ಫರ್ಝಾನಾ ಮುಹಮ್ಮದ್ ಬೇಸರ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಜಾಬ್ ಕುರಿತ ತೀರ್ಪು ಅಸಮಾಧಾನಕರವಾಗಿದೆ. ವಿದ್ಯಾರ್ಥಿನಿಯರ ಹಿತ ಕಡೆಗಣಿಸಿ ಸರ್ಕಾರ ಸಂಘಪರಿವಾರದ ಹಠಕ್ಕೆ ಬಿದ್ದಂತೆ ವರ್ತಿಸುತ್ತಿದೆ. ಈ ತೀರ್ಪು ನಮ್ಮ ಸಂವಿಧಾನದ ಹಕ್ಕನ್ನು ಕಸಿದು ಕೊಂಡಿದೆ. ಸಂಘಪರಿವಾರ ಮಹಿಳಾ ಮತ್ತು ಪ್ರತಿಗಾಮಿ ಕೂಟವಾಗಿದೆ. ನಮ್ಮ ಸಾಕ್ಷರತೆ ಪ್ರಮಾಣ ಇಳಿಸಲು ಸಂಘಪರಿವಾರ ಹಿಜಾಬ್ ವಿವಾದ ಎಬ್ಬಿಸಿದೆ. ಈ ತೀರ್ಪು ಮುಸ್ಲಿಂ ಸಮುದಾಯಕ್ಕೆ ತುಂಬಾ ನೋವುಂಟು ಮಾಡಿದೆ ಎಂದು ಹೇಳಿದರು.

ಈ ತೀರ್ಪು ಸಂಘ ಪರಿವಾರಕ್ಕೆ ಮಾತ್ರ ಖುಷಿ ಕೊಟ್ಟಿದೆ. ಈ ತೀರ್ಪಿಗಾಗಿ ಕಾದಿದ್ದ ಹೆಣ್ಣು ಮಕ್ಕಳಿಗೆ ಯಾವುದೇ ನ್ಯಾಯ ಸಿಕ್ಕಿಲ್ಲ. ಸಂತ್ರಸ್ತ ಹೆಣ್ಮಕ್ಕಳ ಪರವಾಗಿ ನಮ್ಮ ಸಂಘಟನೆ ಧ್ವನಿ ಎತ್ತಲಿದ್ದು, ಅವರಿಗೆ ಬೆಂಬಲ ನೀಡಲಿದೆ. ಧಾರ್ಮಿಕ ಸ್ವಾತಂತ್ರ್ಯದ ಜೊತೆ ಶಿಕ್ಷಣ ಪಡೆಯಿರಿ ಎಂದು ನಾವು ಅವರಿಗೆ ಹೇಳುತ್ತೇವೆ. ಅವರು ಮುಂದೆಯೂ ಕಾನೂನು ಹೋರಾಟ ಮಾಡಲು ನಾವು ಬೆಂಬಲಿಸುತ್ತೇವೆ ಎಂದರು.

ಧಾರ್ಮಿಕ ಸ್ವಾತಂತ್ರ್ಯದ ಜೊತೆ ಪರೀಕ್ಷೆ ಬರೆಯಲು ಅವಕಾಶ ಕೊಟ್ಟರೆ ಅವರು ಬರೆಯಲಿ. ಪರೀಕ್ಷೆ ಬರೆಯಲು ಅವಕಾಶ ಸಿಗದೇ ಅವರು ಹೊರಗೆ ಬಂದರೆ ನಾವು ಅವರ ಬೆಂಬಲಕ್ಕೆ ನಿಲ್ಲುತ್ತೇವೆ. ಅವರು ಪ್ರತಿಭಟಿಸದೇ ಇದ್ದರೆ ಮುಂದೆ ಬೇರೆ ಹಕ್ಕನ್ನು ಕಸಿದುಕೊಳ್ಳಬಹುದು. ಈ ಮೂವರು ನ್ಯಾಯಮೂರ್ತಿಗಳ ತೀರ್ಪು ಸಾಂವಿಧಾನಿಕ ಹಕ್ಕಿನ ವಿರುದ್ಧವಾಗಿದೆ. ಇವತ್ತಿನ ಈ ತೀರ್ಪು ಫ್ಯಾಶಿಷ್ಟರ ಪರ ನೀಡಿದ ತೀರ್ಪಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Join Whatsapp
Exit mobile version