ಬೆಂಗಳೂರು: ಎರಡು ಡೋಸ್ ಲಸಿಕೆ ಪಡೆದವರು ಸರ್ಕಾರಿ ಕಚೇರಿಗಳು, ಮಾಲ್, ಚಿತ್ರಮಂದಿರ, ಹೊಟೇಲ್, ಪಬ್, ಕ್ಲಬ್ ಮುಂತಾದೆಡೆ ಬಳಸಲು ‘ಗ್ರೀನ್ ಪಾಸ್’ ಅಥವಾ ‘ಯೂನಿವರ್ಸಲ್ ಪಾಸ್’ ನೀಡುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ.
ಈ ಬಗ್ಗೆ ಕೋವಿಡ್ ತಾಂತ್ರಿಕ ಸಮಿತಿ ಮತ್ತು ಐಟಿ ಕಂಪನಿಗಳ ಜತೆ ಸಮಾಲೋಚನೆ ನಡೆಸಲಾಗುತ್ತಿದೆ. ಇದರಿಂದ ಕೋವಿಡ್ ನಿಯಂತ್ರಣಕ್ಕೆ ಅನುಕೂಲವಾಗಲಿದೆ. ಹೊರ ರಾಜ್ಯಗಳಿಂದ ರೈಲುಗಳಲ್ಲಿ ಬರುವ ಪ್ರಯಾಣಿಕರು ಕೋವಿಡ್ ಪರೀಕ್ಷೆ ಮಾಡಿಸಿ ನೆಗೆಟಿವ್ ವರದಿ ಕಡ್ಡಾಯವಾಗಿ ತರುವ ಬಗ್ಗೆ ಆದೇಶ ಹೊರಡಿಸಲು ರೈಲ್ವೆ ಸಚಿವರಿಗೆ ಪತ್ರ ಬರೆಯಲು ನಿರ್ಧರಿಸಲಾಗಿದೆ ಎಂದರು.
ಕೋವಿಡ್ ಕುರಿತು ಸಾಮಾಜಿಕ ಜಾಲತಾಣಗಳ ಮೂಲಕ ತಪ್ಪು ಸಂದೇಶಗಳನ್ನು ಕಳುಹಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವರು ಎಚ್ಚರಿಕೆ ನೀಡಿದ್ದಾರೆ.