Home ಟಾಪ್ ಸುದ್ದಿಗಳು ರಾಜ್ಯದಲ್ಲಿ YST ತೆರಿಗೆ ಜಾರಿಗೆ ಬಂದಿದೆ : ಹೆಚ್ಡಿಕೆ ಆರೋಪ

ರಾಜ್ಯದಲ್ಲಿ YST ತೆರಿಗೆ ಜಾರಿಗೆ ಬಂದಿದೆ : ಹೆಚ್ಡಿಕೆ ಆರೋಪ

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಮೇಲೆ ಹೊಸದಾಗಿ ವೈಎಸ್ ಟಿ ತೆರಿಗೆ ಆರಂಭವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ನೇರ ಆರೋಪ ಮಾಡಿದರು.ಜೆಡಿಎಸ್ ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಇಂದು ನಡೆದ ಪಕ್ಷ ಸಂಘಟನೆ ಕುರಿತ ಸಭೆಯಲ್ಲಿ ಪಾಲ್ಗೊಳ್ಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದರು.

ವೈಎಸ್ ಟಿ ಎಂದರೆ ಏನು? ಸ್ವಲ್ಪ ಬಿಡಿಸಿ ಹೇಳಿ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಮಧ್ಯರಾತ್ರಿವರೆಗೂ ತಮ್ಮ ಮನೆಗಳಲ್ಲಿ ಅಧಿಕಾರಿಗಳ ಸಭೆ ಮಾಡುವ ಘನಂದಾರಿ ವ್ಯಕ್ತಿಗಳನ್ನು ಕೇಳಿ, ಈಗಾಗಲೇ ವರ್ಗಾವಣೆ ದಂಧೆಗಾಗಿ ಯಾರನ್ನೆಲ್ಲ ಫೀಲ್ಡಿಗೆ ಇಳಿಸಿ ಗುಪ್ತ ಸಭೆಗಳನ್ನು ಮಾಡುತ್ತಿದ್ದಾರೋ ಅವರನ್ನೇ ಕೇಳಿ, ನೀವೂ ಪತ್ತೆ ಹಚ್ಚಿ ಎಂದರು.

ವರ್ಗಾವಣೆ ದಂಧೆ ಕುರಿತಂತೆ ತಮ್ಮ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೊಟ್ಟಿರುವ ಹೇಳಿಕೆ ಬಗ್ಗೆ ಕಿಡಿಕಾರಿದ ಕುಮಾರಸ್ವಾಮಿ, ನಾನು ಸಿದ್ದರಾಮಯ್ಯ ಅವರನ್ನು ಕೇಳಲು ಬಯಸುತ್ತೇನೆ, ನಾನು ನಿಮ್ಮ ಪಕ್ಷದ ಜತೆ ಸರಕಾರ ರಚನೆ ಮಾಡಿದ್ದಾಗ ನೀವೆಲ್ಲ ಏನೇನು ಮಾಡಿದಿರಿ ಎನ್ನುವುದು ಗೊತ್ತಿದೆ, ಪೊಗರುದಸ್ತಾದ ಇಲಾಖೆಗಳನ್ನು ಇಟ್ಟುಕೊಂಡಿದ್ದ ನಿಮ್ಮ ಮಂತ್ರಿಗಳು ಏನು ಮಾಡಿದರು? ಮುಖ್ಯಮಂತ್ರಿಯಾಗಿ ನಾನು ಯಾವೊಬ್ಬ ಅಧಿಕಾರಿಯನ್ನು ವರ್ಗಾವಣೆ ಮಾಡುವಂತೆಯೇ ಇರಲಿಲ್ಲ. ಎಲ್ಲ ದಂಧೆಗಳು ಯಾರ ಮೂಗಿನಡಿ ನಡೆಯುತ್ತಿದ್ದವು ಎನ್ನುವುದು ಎಲ್ಲರಿಗೂ ಗೊತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಣ ಕೊಟ್ಟು ಹುದ್ದೆ ಪಡೆಯಲು ಬಂದವರನ್ನು ನಾನು ದೂರ ಇಟ್ಟಿದ್ದಾ. ಬಿಡಿಎಗೆ ಬರಲು ಆಸಕ್ತಿ ವಹಿಸಿದ್ದ ಅಕಾರಿಯನ್ನೇ ಹೊರಗಟ್ಟಿದ್ದೆ. ಯಲಹಂಕ ತಹಶಿಲ್ದಾರ್ ಹುದ್ದೆಗೆ ಒಂದೂವರೆ ಕೋಟಿ ಕೊಡುತ್ತೇವೆ ಎಂದವರನ್ನು ಆಚೆ ಇಟ್ಟಿದ್ದೆ. ಇದು ನಾನು ನಡೆಸಿದ ಆಡಳಿತ. ಈಗ ನೋಡಿದರೆ ವೈಎಸ್‍ಟಿ ತೆರಿಗೆ ಎಂದು ಇವರು ಶುರು ಮಾಡಿಕೊಂಡಿದ್ದಾರೆ ಎಂದು ಕಟುವಾಗಿ ಟೀಕೆ ಮಾಡಿದರು.

ವರ್ಗಾವಣೆ ಮಾಡುವ ದಂಧೆ ಮಾಡದೇ ವಸೂಲಿ ಶುರುವಾಗಿದೆ. ಅಧಿಕಾರಿಗಳನ್ನು ಮನೆಯಲ್ಲಿ ಕೂರಿಸಿಕೊಂಡು ರಾತ್ರಿ ಒಂದು ಗಂಟೆಯವರೆಗೆ ಸಭೆ ಮಾಡುತ್ತಾ ಇದ್ದಾರಲ್ಲೆ ಏಕೆ, ಸರಕಾರಿ ಕಚೇರಿಗಳಲ್ಲಿ ಏಕೆ ಸಭೆಗಳನ್ನು ನಡೆಸುವುದಿಲ್ಲ? ಎಂದು ಅವರು ಖಾರವಾಗಿ ಪ್ರಶ್ನಿಸಿದರು.

Join Whatsapp
Exit mobile version