Home ಟಾಪ್ ಸುದ್ದಿಗಳು ಮೇಕೆದಾಟು ಯೋಜನೆಗಾಗಿ “ನಮ್ಮ ನೀರು ನಮ್ಮ ಹಕ್ಕು” ಪಾದಯಾತ್ರೆ ಫೆ.27ರಿಂದ ಪುನಾರಂಭ; ಡಿಕೆ ಶಿವಕುಮಾರ್

ಮೇಕೆದಾಟು ಯೋಜನೆಗಾಗಿ “ನಮ್ಮ ನೀರು ನಮ್ಮ ಹಕ್ಕು” ಪಾದಯಾತ್ರೆ ಫೆ.27ರಿಂದ ಪುನಾರಂಭ; ಡಿಕೆ ಶಿವಕುಮಾರ್

ಬೆಂಗಳೂರು: ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಕಾಂಗ್ರೆಸ್ ಹಮ್ಮಿಕೊಂಡಿದ್ದ ‘ನಮ್ಮ ನೀರು, ನಮ್ಮ ಹಕ್ಕು’ ಪಾದಯಾತ್ರೆಯು ಫೆಬ್ರವರಿ 27 ರಂದು ರಾಮನಗರದಿಂದ ಪುನರಾರಂಭವಾಗಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಶನಿವಾರ ಮಾಹಿತಿ ನೀಡಿದ್ದಾರೆ.
ಕರ್ನಾಟಕದ ಒಳಿತಿಗಾಗಿ ಹಾಗೂ ಕುಡಿಯುವ ನೀರಿಗಾಗಿ ನಮ್ಮ ಹೋರಾಟ ಮುಂದುವರಿಯಲಿದೆ. ನಮ್ಮ ನೀರಿನ ಹಕ್ಕಿಗಾಗಿ ಎಲ್ಲರೂ ಸೇರಿ ಜೊತೆಯಾಗಿ‌ ನಡೆಯೋಣ. ಮೇಕೆದಾಟು ಪಾದಯಾತ್ರೆಯು ಯಶಸ್ವಿಯಾಗಲು ಪಣತೊಡೋಣ” ಎಂದು ಡಿಕೆ ಶಿವಕುಮಾರ್ ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.


ಕಳೆದ ಜನವರಿ 9ರಂದು ರಾಜ್ಯದಲ್ಲಿ ಕಾಂಗ್ರೆಸ್ ಆರಂಭಿಸಿದ ಮೇಕೆದಾಟು ಪಾದಯಾತ್ರೆಯನ್ನು ಜನವರಿ 13ರಂದು ರಾಮನಗರದಲ್ಲಿ ಮೊಟಕುಗೊಳಿಸಲಾಗಿತ್ತು. ಕೊವಿಡ್-19 ಸೋಂಕಿತ ಪ್ರಕರಣಗಳ ಸಂಖ್ಯೆ ಹೆಚ್ಚಿದ ಹಿನ್ನೆಲೆ ಮಾರ್ಗಸೂಚಿ ಪಾಲನೆ ಉದ್ದೇಶದಿಂದ ಕಾಂಗ್ರೆಸ್ ತನ್ನ ಪಾದಯಾತ್ರೆಯನ್ನು ಅರ್ಧಕ್ಕೆ ಮೊಟಕುಗೊಳಿಸಿತ್ತು. ಶನಿವಾರ ಮೇಕೆದಾಟು ಪಾದಯಾತ್ರೆ ಬಗ್ಗೆ ಮತ್ತೆ ಸರಣಿ ಟ್ವೀಟ್ ಮಾಡಿರುವ ಡಿ ಕೆ ಶಿವಕುಮಾರ್, ತಮ್ಮ ಹೋರಾಟವನ್ನು ಮುಂದುವರಿಸುವುದಾಗಿ ಹೇಳಿದ್ದಾರೆ.

“ನಾಡಿನ ಒಳಿತಿಗಾಗಿ ಮೇಕೆದಾಟು ಪಾದಯಾತ್ರೆಯನ್ನು ನಡೆಸಿದ ವೇಳೆ ನಮ್ಮ ಮೇಲೆ ಸುಳ್ಳು ಪ್ರಕರಣಗಳನ್ನು ದಾಖಲಿಸಲಾಗಿತ್ತು. ಆದರೆ ಬಿಜೆಪಿ ನಾಯಕರು ನಡೆಸಿದ ಕಾರ್ಯಕ್ರಮಗಳ ಕುರಿತು ಸರ್ಕಾರ ಜಾಣಕುರುಡು ಪ್ರದರ್ಶಿಸಿತು. ಮಾನ್ಯ ಮುಖ್ಯಮಂತ್ರಿಗಳು ದ್ವಂದ್ವ ನಿಲುವು ಅನಿಸರಿಸುತ್ತಿರುವುದು ಖಂಡನಾರ್ಹ,” ಎಂದು ಡಿಕೆಶಿ ಟ್ವೀಟ್ ಮಾಡಿದ್ದಾರೆ.

ಬಿಜೆಪಿಯದ್ದು ಒಡೆದು ಆಳುವ ನೀತಿ:
“ಬಿಜೆಪಿಯು ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿದೆ. ಉಡುಪಿಯಲ್ಲಿ ನಡೆದ ಘಟನೆ ಇದನ್ನು ಪುಷ್ಟೀಕರಿಸುತ್ತದೆ. ನಾಡಿನ ಹಿತಕ್ಕಾಗಿ ನಾವು ಕಟಿಬದ್ಧರಾಗಿದ್ದೇವೆ. ರಾಷ್ಟ್ರಧ್ವಜದ ಗೌರವವನ್ನು ಕಾಪಾಡಲು ಹಾಗೂ ಸಂವಿಧಾನದ ಆಶಯಗಳಿಗೆ ಧಕ್ಕೆ ಬರದಂತೆ ನೋಡಿಕೊಳ್ಳಲು ನಾವು ಹೋರಾಡುತ್ತಿದ್ದೇವೆ,” ಎಂದು ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ.

Join Whatsapp
Exit mobile version