Home ಜಾಲತಾಣದಿಂದ ಸೋಲಿನ ಬೆನ್ನಲ್ಲೇ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ ಎಂಪಿ ರೇಣುಕಾಚಾರ್ಯ

ಸೋಲಿನ ಬೆನ್ನಲ್ಲೇ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ ಎಂಪಿ ರೇಣುಕಾಚಾರ್ಯ

ದಾವಣಗೆರೆ: ಬಿಜೆಪಿ ನಾಯಕ ಎಂಪಿ ರೇಣುಕಾಚಾರ್ಯ ಅವರು ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದಾರೆ.

ಈ ಬಾರಿ ಚುನಾವಣೆಯಲ್ಲಿ ಸೋಲಾಗಿರುವ ಹಿನ್ನೆಲೆಯಲ್ಲಿ ರೇಣುಕಾಚಾರ್ಯ ಅವರು ಭಾವುಕರಾಗಿದ್ದು, ಯಾವುದೇ ಕಾರಣಕ್ಕೂ ಚುನಾವಣೆಗೆ ಬರುವುದಿಲ್ಲ ಎಂದು ಚುನಾವಣಾ ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ. ಫಲಿತಾಂಶದ ಬಳಿಕ ಹೊನ್ನಾಳಿಯಲ್ಲಿ ಬೆಂಬಲಿಗರೊಂದಿಗೆ ಮಾತನಾಡಿದ ರೇಣುಕಾಚಾರ್ಯ, ಮುಂದಿನ ದಿನಗಳಲ್ಲಿ ಚುನಾವಣೆಗೆ ನಿಲ್ಲುವುದಿಲ್ಲ. ಪಕ್ಷ ಯಾರಿಗೆ ಟಿಕೆಟ್ ನೀಡಿದರೂ ಅವರ ಪರ ಕೆಲಸ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದರು.

ಕೊವಿಡ್​​ ವೇಳೆ ಜೀವದ ಹಂಗು ತೊರೆದು ಕೆಲಸ ಮಾಡಿದ್ದೇನೆ. ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದರೂ ಜನ ಸೋಲಿಸಿದ್ದಾರೆ ಎಂದು ಬೆಂಬಲಿಗರ ಮುಂದೆ ಕಣ್ಣೀರಿಟ್ಟರು. ಅಲ್ಲದೇ ಪಕ್ಷ ಯಾರಿಗೆ ಟಿಕೇಟ್ ನೀಡಿದರೂ ಅವರ ಪರವಾಗಿ ಕೆಲಸ ಮಾಡುತ್ತೇನೆ. ಯಾವುದೇ ಕಾರಣಕ್ಕೂ ಚುನಾವಣೆಗೆ ಬರೋದಿಲ್ಲ ಎಂದು ಸ್ಪಷ್ಟಪಡಿಸಿದರು.

ನಾನು ಕ್ಷೇತ್ರದ ಜನರಿಗೆ ಹಗಲಿರುಳು ಕೆಲಸ ಮಾಡಿದೆ. ಆದರೂ ಈ ರೀತಿ ಸೋಲು ಆಯ್ತು ಎಂದು ಸೋಲಿನ ಆಘಾತದಿಂದ ತಮ್ಮ ಕ್ಷೇತ್ರದ ಅಭಿಮಾನಿಗಳ ಎದುರು ಮಾತನಾಡಲು ಆಗದೆ ರೇಣುಕಾಚಾರ್ಯ ಕಣ್ಣೀರಿಟ್ಟಿದ್ದಾರೆ. ತಾಲೂಕಿನ ಎಲ್ಲಾ ನಾಯಕರು ನನ್ನ ಪರ ಕೆಲಸ ಮಾಡಿದ್ದರು. ನನಗೆ ಮತ ಕೊಟ್ಟವರಿಗೂ, ಕೊಡದವರಿಗೂ ಈ ಸಂದರ್ಭದಲ್ಲಿ ಧನ್ಯವಾದ ತಿಳಿಸುತ್ತೇನೆ. ಸೋಲಿನ ಬಳಿಕವೂ ನೀವು ನನ್ನ ಮನೆಗೆ ಬಂದಿದ್ದೀರಿ. ಕೋವಿಡ್​ನಲ್ಲಿ ಕೆಲಸ ಮಾಡಿದ್ದೆ, ಕ್ಷೇತ್ರದ ಅಭಿವೃದ್ಧಿ ಕೆಲಸ ಮಾಡಿದ್ದೆ. ಆದರೆ ಈಗ ಸೋತ ಬಳಿಕ ನಾನು ಯಾರ ಬಗ್ಗೆಯೂ ಆರೋಪ ಮಾಡಲ್ಲ, ನನ್ನ ಸೋಲಿಗೆ ನಾನೇ ಕಾರಣ ಅಂತ ಭಾವಿಸುತ್ತೇನೆ. ಮತದಾರರಿಗೆ ನನ್ನ ಮೇಲೆ ನಂಬಿಕೆ ಇರಲಿಲ್ಲ ಅನ್ಸುತ್ತೆ. ನಾನು ಗೆದ್ದರೂ ಧ್ವೇಷ ರಾಜಕಾರಣ ಮಾಡಿರಲಿಲ್ಲ ಎಂದು ರೇಣುಕಾಚಾರ್ಯ ನೋವು ತೋಡಿಕೊಂಡಿದ್ದಾರೆ.

ಅಂಚೆ ಮತ ಎಣಿಕೆ ಸಂದರ್ಭದಲ್ಲಿಯೇ ಹಿನ್ನಡೆ ಅನುಭವಿಸಿದ ರೇಣುಕಾಚಾರ್ಯ ಅವರು ಮತ್ತೆ ಚೇತರಿಸಿಕೊಳ್ಳುವುದು ಸಾಧ್ಯವಾಗಲಿಲ್ಲ. ಇವಿಎಂ ಮತಗಳ ಎಣಿಕೆಯಲ್ಲಿಯೂ ಶಾಂತನಗೌಡ ಅವರು ಗಮನಾರ್ಹ ಮುನ್ನಡೆ ಕಾಯ್ದುಕೊಂಡಿದ್ದರು. ಸುಮಾರು 14 ಸಾವಿರ ಮತಗಳ ಅಂತರದಿಂದ ಶಾಂತನಗೌಡ ಮುನ್ನಡೆ ಪಡೆದಿದ್ದರು. ಅಧಿಕೃತ ಫಲಿತಾಂಶದ ವೇಳೆ ರೇಣುಕಾಚಾರ್ಯ ಸೋಲನುಭವಿಸಿದ್ದು, ಕಾಂಗ್ರೆಸ್‌ ಅಭ್ಯರ್ಥಿ ಡಿ.ಜಿ. ಶಾಂತನಗೌಡ ಗೆಲುವಿನ ನಗೆ ಬೀರಿದ್ದಾರೆ.

2018ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಎಂ.ಪಿ. ರೇಣುಕಾಚಾರ್ಯ 80,624 ಮತಗಳನ್ನು ಪಡೆದಿದ್ದರೆ, ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಡಿ.ಜಿ. ಶಾಂತನಗೌಡ 76,391 ಮತಗಳನ್ನು ಪಡೆದಿದ್ದರು. ಈ ಮೂಲಕ ಎಂಪಿ ರೇಣುಕಾಚಾರ್ಯ ಕೇವಲ 4233 ಮತಗಳಿಂದ ಗೆದ್ದಿದ್ದರು. ಬಳಿಕ ಸಿಎಂ ರಾಜಕೀಯ ಕಾರ್ಯದರ್ಶಿ ಆಗಿದ್ದರು. ಇನ್ನು 2013ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಡಿ.ಜಿ. ಶಾಂತನಗೌಡ ಹೊನ್ನಾಳಿ ಕ್ಷೇತ್ರದಲ್ಲಿ ಗೆದ್ದಿದ್ದರು. ಆಗ ಬಿಜೆಪಿಯಿಂದ ಹೊರ ಹೋಗಿ ಕೆಜೆಪಿ ಸೇರಿದ್ದ ಎಂ.ಪಿ. ರೇಣುಕಾಚಾರ್ಯ ಎರಡನೇ ಸ್ಥಾನ ಪಡೆದಿದ್ದರು.

Join Whatsapp
Exit mobile version