Home ಟಾಪ್ ಸುದ್ದಿಗಳು “ಕರ್ನಾಟಕ ವಿಧಾನಸಭೆ- ಎರಡು ವರ್ಷದ ಸಾಧನೆಗಳು” ಪುಸ್ತಕ ಬಿಡುಗಡೆ

“ಕರ್ನಾಟಕ ವಿಧಾನಸಭೆ- ಎರಡು ವರ್ಷದ ಸಾಧನೆಗಳು” ಪುಸ್ತಕ ಬಿಡುಗಡೆ

ಬೆಂಗಳೂರು, ಜುಲೈ 31: ಕಳೆದ ಎರಡು ವರ್ಷಗಳಿಂದ ಸಭಾಧ್ಯಕ್ಷನಾಗಿ ನನ್ನ ಕಾರ್ಯಕ್ಷೇತ್ರವು ಕೇವಲ ಸದನಕ್ಕೆ ಅಥವಾ ವಿಧಾನಸಭೆ ಸಚಿವಾಲಯದ ಆಡಳಿತಕ್ಕೆ ಸೀಮಿತಗೊಳಿಸದೆ ಅತ್ಯಂತ ಕ್ರಿಯಾಶೀಲವಾಗಿ ಜವಾಬ್ದಾರಿ ನಿರ್ವಹಿಸಿದ ತೃಪ್ತಿ ಇದೆಯೆಂದು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.


ಇಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ “ಕರ್ನಾಟಕ ವಿಧಾನಸಭೆ- ಎರಡು ವರ್ಷದ ಸಾಧನೆಗಳು” (2019-2021) ಪುಸ್ತಕ ಬಿಡುಗಡೆ ಮಾಡಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಂವಿಧಾನವು ಸಭಾಧ್ಯಕ್ಷ ಸ್ಥಾನವನ್ನು ಕಲ್ಪಿಸಿದ್ದು, ಅಧಿಕಾರ ಮತ್ತು ಕರ್ತವ್ಯಗಳು ನಿರೂಪಿಸಿದ್ದರೂ ಸಂದರ್ಭಕ್ಕನುಗುಣವಾದ ಬೆಳವಣಿಗೆಗಳ ಆಧಾರದ ಮೇಲೆ ಕಾನೂನಿನ ಚೌಕಟ್ಟಿನ ಒಳಗೆ ಕಾರ್ಯನಿರ್ವಹಿಸುವುದು ಅತ್ಯಂತ ಜವಾಬ್ಧಾರಿಯುತ ಕಾರ್ಯವಾಗಿದೆ ಎಂದು ಹೇಳಿದರು.


ನಾಡಿನ ಜನರ ಆಶೋತ್ತರಗಳನ್ನು ಈಡೇರಿಸುವ ನಿಟ್ಟಿನಲ್ಲಿ ಸದನದಲ್ಲಿ ಚರ್ಚೆಗಳು ಉತ್ತಮವಾಗಿ ಹಾಗೂ ಪರಿಣಾಮಕಾರಿಯಾಗಿ ನಡೆಯುವಂತೆ ನೋಡಿಕೊಳ್ಳುವ ಜವಾಬ್ದಾರಿ ಸಭಾಧ್ಯಕ್ಷರ ಮೇಲಿರುತ್ತದೆ. ಸಭಾಧ್ಯಕ್ಷರಾಗಿರುವವರು ಅತ್ಯಂತ ತಾಳ್ಮೆಯಿಂದ ಜನಪ್ರತಿನಿಧಿಗಳ ಮನವೊಲಿಸಿ ಸದನವನ್ನು ಸುಗಮವಾಗಿ ಮುನ್ನಡೆಸುವುದು ಸವಾಲಿನ ವಿಷಯವಾಗಿರುತ್ತದೆ. ಇಂತಹ ಒಂದು ಜವಾಬ್ದಾರಿಯುತ ಸ್ಥಾನವನ್ನು ನಿಷ್ಪಕ್ಷಪಾತವಾಗಿ ನಡೆಸಿ ಶಾಸನ ರಚನೆ, ಪ್ರಶ್ನೋತ್ತರ ಹಾಗೂ ಇತರೆ ಕಾರ್ಯಕಲಾಪಗಳಲ್ಲಿ ಕ್ರಿಯಾಶೀಲವಾಗಿ ನಡೆಸಲಾಗಿದೆ.


ಕಳೆದ ಎರಡು ವರ್ಷಗಳಲ್ಲಿ ಸಭಾಧ್ಯಕ್ಷನಾಗಿ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆದಿರುವ ಸಮ್ಮೇಳನಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ನನ್ನ ವಿಚಾರಧಾರೆಗಳನ್ನು ಮಂಡಿಸಿರುತ್ತೇನೆ. ಲೋಕಸಭಾಧ್ಯಕ್ಷ ಓಂ ಬಿರ್ಲಾ ಅವರು ಭಾರತದಲ್ಲಿ ಪಕ್ಷಾಂತರ ನಿಷೇಧ ಕಾಯ್ದೆಯಡಿಯಲ್ಲಿ ರಚಿಸಲಾದ ಸಮಿತಿಗೆ ಹಾಗೂ ಕಾಮನ್ ವೆಲ್ತ್ ಸಂಸದೀಯ ಸಂಘ ಭಾರತ ವಲಯದ ಕಾರ್ಯಕಾರಿ ಸಮಿತಿಗೆ ನನ್ನನ್ನು ಸದಸ್ಯನನ್ನಾಗಿ ನೇಮಿಸಿರುತ್ತಾರೆ. ರಾಜ್ಯಮಟ್ಟದಲ್ಲಿ “ಸಂಸದೀಯ ಮೌಲ್ಯಗಳ ಕುಸಿತವನ್ನು ತಡೆಗಟ್ಟುವ ನಿಟ್ಟಿನಲ್ಲಿ –ಒಂದು ಆತ್ಮಾವಲೋಕನ” ಸಭೆಯನ್ನು ಹಮ್ಮಿಕೊಂಡು ಹಿರಿಯ ರಾಜಕಾರಣಿಗಳು, ಸಾಮಾಜಿಕ ಚಿಂತಕರು ಹಾಗೂ ಪತ್ರಕರ್ತರನ್ನು ಆಹ್ವಾನಿಸಿ ಅವರ ಸಲಹೆ ಸೂಚನೆಗಳನ್ನು ಪಡೆಯಲಾಯಿತು. “ಒಂದು ರಾಷ್ಟ್ರ-ಒಂದು ಚುನಾವಣೆ” ಪ್ರಚಲಿತ ವಿಷಯ ಕುರಿತಂತೆ ವಿಧಾನಸಭೆಯಲ್ಲಿ ವಿಶೇಷ ಚರ್ಚೆಯನ್ನು ಸಹ ಹಮ್ಮಿಕೊಳ್ಳಲಾಗಿತ್ತು.


ರಾಜ್ಯದ ವಿಧಾನಸಭೆಯ ಅಧಿವೇಶನ ಕುರಿತಂತೆ ರಾಷ್ಟ್ರ ಮಟ್ಟದ ಸಂಶೋಧನಾ ಸಂಸ್ಥೆ ನೀಡಿರುವ ಸಮೀಕ್ಷಾ ವರದಿಯಲ್ಲಿ ಕರ್ನಾಟಕ ರಾಜ್ಯವು ವಿಧಾನಸಭೆ ಅಧಿವೇಶನ ನಡೆಸಿರುವ ರಾಜ್ಯಗಳಲ್ಲಿಯೇ ಅಗ್ರಸ್ಥಾನದಲ್ಲಿದೆ. ಹಾಗೂ 2020ರಲ್ಲಿ 31ದಿನ ಅಧಿವೇಶನ ನಡೆಸಿ 61 ವಿಧೇಯಕಗಳನ್ನು ಅಂಗೀಕರಿಸಿರುವುದು ಸಂಸದೀಯ ವ್ಯವಸ್ಥೆಯಲ್ಲಿ ಮೈಲಿಗಲ್ಲಾಗಿದೆ ಎಂಬುದು ಹೆಮ್ಮೆಯ ವಿಷಯವಾಗಿದೆ.


ಕೇವಲ ಅಧಿವೇಶನಕ್ಕಷ್ಟೇ ಸೀಮಿತವಾಗದೆ ಕರ್ನಾಟಕ ವಿಧಾನಸಭೆ ಸಚಿವಾಲಯದಿಂದ ಪ್ರಕಟವಾಗುತ್ತಿದ್ದ “ಕರ್ನಾಟಕ ಶಾಸಕಾಂಗ ಪತ್ರಿಕೆ” ಯನ್ನು 2019 ರಿಂದ ಮರುಚಾಲನೆ ನೀಡಲಾಗಿದೆ. ಸಚಿವಾಲಯದ ಮಾನವ ಸಂಪನ್ಮೂಲ ಕಾರ್ಯಾಧ್ಯಕ್ಷತೆಗೆ ಅಧಿಕಾರಿ ಹಾಗೂ ಸಿಬ್ಬಂದಿಗೆ ತರಬೇತಿ ವ್ಯವಸ್ಥೆ ಮಾಡಿಸಲಾಗಿದ್ದು ಸಚಿವಾಲಯದ ಕಾರ್ಯಗಳ ವೇಗವನ್ನು ಹೆಚ್ಚಿಸಲಾಗಿದೆ. ಪರಿಸರ ಸ್ನೇಹಿ ಮತ್ತು ಕಾಗದರಹಿತ ವಾಗಿಸುವ ನಿಟ್ಟಿನಲ್ಲಿ ಇ-ವಿಧಾನ್ ಯೋಜನೆಗೆ ಅಗತ್ಯ ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದರು.

Join Whatsapp
Exit mobile version