Home ಟಾಪ್ ಸುದ್ದಿಗಳು ಕಾವೇರಿ ನೀರಿಗಾಗಿ ಕರ್ನಾಟಕ-ತಮಿಳುನಾಡು ಸಂಘರ್ಷ: ಇಂದು ಸುಪ್ರೀಂಕೋರ್ಟ್’ನಲ್ಲಿ ಅರ್ಜಿ ವಿಚಾರಣೆ

ಕಾವೇರಿ ನೀರಿಗಾಗಿ ಕರ್ನಾಟಕ-ತಮಿಳುನಾಡು ಸಂಘರ್ಷ: ಇಂದು ಸುಪ್ರೀಂಕೋರ್ಟ್’ನಲ್ಲಿ ಅರ್ಜಿ ವಿಚಾರಣೆ

ಹೊಸದಿಲ್ಲಿ: ಕರ್ನಾಟಕ ಕಾವೇರಿ‌ ನೀರನ್ನು ಸಮರ್ಪಕವಾಗಿ ಹರಿಸುತ್ತಿಲ್ಲ ಎಂದು ಆರೋಪಿಸಿ ತಮಿಳುನಾಡು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು, ಈ ಅರ್ಜಿ ವಿಚಾರಣೆಯನ್ನು ಇಂದು (ಸೆಪ್ಟೆಂಬರ್ 06) ಸುಪ್ರೀಂಕೋರ್ಟ್ ಕೈಗೆತ್ತಿಕೊಳ್ಳಲಿದೆ.

ನ್ಯಾಯಮೂರ್ತಿ ಬಿ.ಆರ್ ಗವಾಯಿ ಅವರ ನೇತೃತ್ವದ ತ್ರಿಸದಸ್ಯ ಪೀಠದಲ್ಲಿ ವಿಚಾರಣೆ ನಡೆಯಲಿದೆ. ಕಳೆದ ವಾರ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವೂ, ಕರ್ನಾಟಕ ಪ್ರತಿದಿನ ಮುಂದಿನ ಹದಿನೈದು ದಿನಗಳಿಗೆ 5 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಆದೇಶಿಸಿತ್ತು. CWMA ಆದೇಶಕ್ಕೆ‌ ತಮಿಳುನಾಡು ಆಕ್ಷೇಪ ವ್ಯಕ್ತಪಡಿಸಿತ್ತು. 5 ಸಾವಿರ ಕ್ಯೂಸೆಕ್ ನೀರು ಸಾಲುವುದಿಲ್ಲ. 24 ಸಾವಿರ ಕ್ಯೂಸೆಕ್ ನೀರು ಬೇಕು ಎಂದು ಒತ್ತಡ ಹೇರಿತ್ತು‌‌. ಆದ್ರೆ, ಇದಕ್ಕೆ CWMA ಒಪ್ಪಿರಲಿಲ್ಲ. ಇದೀಗ ಸುಪ್ರಿಂಕೋರ್ಟ್ ಮೆಟ್ಟಿಲೇರಿರುವ ತಮಿಳುನಾಡು ಸರ್ಕಾರ, ಹೆಚ್ಚು ನೀರು ಬಿಡುವುದಕ್ಕೆ ಸೂಚಿಸುವಂತೆ ಮನವಿ ಮಾಡಿದೆ.

ರಾಜ್ಯದ ನೀರಿನ ಸ್ಥಿತಿಗತಿ ಬಗ್ಗೆ ಸುಪ್ರೀಂಗೆ ಸರ್ಕಾರ ಮನವರಿಕೆ

ಇತ್ತ ಕರ್ನಾಟಕ ಸರ್ಕಾರವೂ ಕೂಡ ಮಳೆಯ ಕೊರತೆಯ ಚಿತ್ರಣವನ್ನು ಸುಪ್ರೀಂಕೋರ್ಟ್ ಮುಂದೆ ಇಡಲು ತಯಾರಿ ನಡೆಸಿದೆ. ಈ ಬಾರಿ ಕಾವೇರಿ ಕಣಿವೆ ಪ್ರದೇಶದಲ್ಲಿ 57 ಪರ್ಸೆಂಟ್ ಮಳೆ ಕೊರತೆಯಾಗಿದೆ. ಡ್ಯಾಂಗಳು ಬರಿದಾಗುತ್ತಿವೆ. ಕುಡಿಯುವ ನೀರಿಗೂ ಸಮಸ್ಯೆಯಾಗಲಿದೆ. ಇದರಿಂದ ನಿತ್ಯ 5ಸಾವಿರ ಕ್ಯೂಸೆಕ್ ನೀರು ಹರಿಸಲು ಕಷ್ಟವಾಗಲಿದೆ ಎಂದು ವಾದ ಮಾಡಲು ತಯಾರಿ ಮಾಡಿದೆ. ರಾಜ್ಯದ ಪರ ಹಿರಿಯ ವಕೀಲರಾದ ಶ್ಯಾಮ್ ದಿವಾನ್ ಹಾಗೂ ಮೋಹನ್ ಕಾತರಿಕಿ ವಾದ ಮಾಡಲಿದ್ದಾರೆ‌. ತಮಿಳುನಾಡು ಪರ ಹಿರಿಯ ವಕೀಲ ಮುಕುಲ್ ರೋಹಟಗಿ ವಾದ ಮಂಡಿಸಲಿದ್ದಾರೆ.

ಜೀವಜಲಕ್ಕಾಗಿ ಸುಪ್ರೀಂಕೋರ್ಟ್​​ ಮೆಟ್ಟಿಲೇರಿದ ರೈತಸಂಘಟನೆಗಳು!

ಕಾವೇರಿ ನೀರಿಗಾಗಿ ಎರಡು ರಾಜ್ಯ ಸರ್ಕಾರಗಳು ಕಾನೂನು ಹೋರಾಟ ನಡೆಸುತ್ತಿರುವ ಮಧ್ಯೆ ಕರ್ನಾಟಕದ ರೈತ ಸಂಘಟನೆಗಳು ಸುಪ್ರೀಂಕೋರ್ಟ್ ಮೊರೆ ಹೋಗಿವೆ. ಕಾವೇರಿ ನೀರಿಗಾಗಿ ರೈತ ಸಂಘಟನೆಗಳು ಕೂಡ ಸುಪ್ರೀಂಗೆ ಅರ್ಜಿ ಸಲ್ಲಿಸಿವೆ.‌ ನಾವು ಬೆಳೆಗೆ ನೀರು ಕೇಳುತ್ತಿಲ್ಲ, ಕುಡಿಯಲು ಕೇಳುತ್ತಿದ್ದೇವೆ ಎಂದು ಮನವಿ ಮಾಡಿವೆ. ಇಂದಿನ ವಿಚಾರಣೆ ವೇಳೆ ನಮ್ಮ ಅರ್ಜಿಯನ್ನ ಪುರಸ್ಕರಿಸುವಂತೆ ರೈತ ಸಂಘಟನೆಗಳು ಮನವಿ ಮಾಡಲಿವೆ.

Join Whatsapp
Exit mobile version