►ದೈಹಿಕ ಶಿಕ್ಷಣದ ಜೊತೆ ಕಾನೂನು ಜ್ಞಾನ ನೀಡಿದಕ್ಕಾಗಿ ಬಂಧನ
ತೆಲಂಗಾಣ: ಇಲ್ಲಿನ ಮುಸ್ಲಿಮ್ ಯುವಕರಿಗೆ ಗಲಭೆಯಲ್ಲಿ ಪಾಲ್ಗೊಳ್ಳಲು ತರಬೇತಿ ನೀಡುತ್ತಿದ್ದರು ಎಂದು ಆರೋಪಿಸಿ 52 ವರ್ಷದ ಅಬ್ದುಲ್ ಖಾದರ್ ಎಂಬ ಕರಾಟೆ ಶಿಕ್ಷಕರೊಬ್ಬರನ್ನು ತೆಲಂಗಾಣ ಪೊಲೀಸರು ಬಂಧಿಸಿದ್ದಾರೆ.
ಉತ್ತರ ತೆಲಂಗಾಣದ ನಿಜಾಮಾಬಾದ್ ನ ಆಟೋನಗರದ ನಿವಾಸಿಯಾಗಿರುವ ಖಾದರ್, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಸದಸ್ಯರಾಗಿದ್ದಾರೆ. ಅವರ ಮನೆಯಿಂದ ಪಿಎಫ್ಐ ಬ್ಯಾನರ್ ಗಳು, ಲೇಖನ ಸಾಮಗ್ರಿಗಳು, ಓದುವ ಸಾಮಗ್ರಿಗಳು ಮತ್ತು ಪುಸ್ತಕಗಳು, ಆಡಿಯೊ ವ್ಯವಸ್ಥೆ ಮತ್ತು ಹಲವಾರು ಬಸ್ ಮತ್ತು ರೈಲು ಟಿಕೆಟ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ
ಖಾದರ್ ತೆಲಂಗಾಣ ಮತ್ತು ಆಂಧ್ರಪ್ರದೇಶದ ವಿವಿಧ ಜಿಲ್ಲೆಗಳಿಂದ ಬಡ ಕುಟುಂಬಗಳ ಮುಸ್ಲಿಂ ಯುವಕರಿಗೆ ದೈಹಿಕ ತರಬೇತಿ ನೀಡುತ್ತಿದ್ದರು. ದೈಹಿಕ ತರಬೇತಿಯ ಜೊತೆಗೆ, ಯುವಕರಿಗೆ ಕಾನೂನು ಜ್ಞಾನವನ್ನು ಸಹ ನೀಡಲಾಗಿದೆ ಎಂದು ನಿಜಾಮಾಬಾದ್ ನ ಸಹಾಯಕ ಪೊಲೀಸ್ ಆಯುಕ್ತ ಮತ್ತು ಪ್ರಕರಣದ ತನಿಖಾಧಿಕಾರಿಯೂ ಆದಂತಹ ಎ ವೆಂಕಟೇಶ್ವರ್ ತಿಳಿಸಿದ್ದಾರೆ
ಖಾದರ್ ಅವರ ಇಂತಹ ಶಿಬಿರಗಳು ಮೂರು ದಿನಗಳಿಂದ ಒಂದು ವಾರದವರೆಗೆ ನಡೆಯುತ್ತವೆ, ಇದರಲ್ಲಿ ಮುಸ್ಲಿಂ ಯುವಕರು ಮತ್ತು ತೆಲಂಗಾಣದಾದ್ಯಂತದ ಪಿಎಫ್ಐ ಕಾರ್ಯಕರ್ತರು ಮತ್ತು ಆಂಧ್ರಪ್ರದೇಶದ ದೂರದ ಜಿಲ್ಲೆಗಳಾದ ಕರ್ನೂಲ್ ಮತ್ತು ನೆಲ್ಲೂರು ಜಿಲ್ಲೆಗಳ ಯುವಕರು ಕೂಡ ಭಾಗವಹಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.. ಖಾದರ್ ಅವರಿಂದ ಸಂಗ್ರಹಿಸಿದ ಮಾಹಿತಿಯಿಂದ, ನಾವು ಅವರ ಸಹಚರರು ಮತ್ತು ಅವರಿಂದ ತರಬೇತಿ ಪಡೆದವರನ್ನು ಹುಡುಕುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 120 ಎ ಮತ್ತು 120 ಬಿ (ಕ್ರಿಮಿನಲ್ ಪಿತೂರಿ) ಮತ್ತು 153 ಎ (ಧಾರ್ಮಿಕ ದ್ವೇಷವನ್ನು ಉತ್ತೇಜಿಸುವುದು) ಮತ್ತು ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ, 1967 ರ ಸೆಕ್ಷನ್ 13 (1) (ಬಿ) ಅಡಿಯಲ್ಲಿ ಖಾದರ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ನಂತರ ಖಾದರ್ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ