ಉಡುಪಿ: ಕಾಪು ಪೊಲೀಸರು ಮುಸ್ಲಿಮ್ ಕುಟುಂಬದ ಮನೆಗೆ ನುಗ್ಗಿ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಸತ್ಯಕ್ಕೆ ದೂರವಾದುದು ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ವಿಷ್ಣುವರ್ಧನ್ ಸ್ಪಷ್ಟಪಡಿಸಿದ್ದಾರೆ.
ಮೂಳೂರಿನ ಮನೆಯೊಂದರಲ್ಲಿ ಗೋವನ್ನು ಕಡಿದು ಮಾಂಸ ಮಾಡಲಾಗುತ್ತದೆ ಎಂಬ ಖಚಿತ ಮಾಹಿತಿಯ ಮೇರೆಗೆ ಕಾಪು ಪೊಲೀಸ್ ಠಾಣೆಯ ಠಾಣಾಧಿಕಾರಿ ರಾಘವೇಂದ್ರ ಮತ್ತವರ ಪುರುಷ ಹಾಗೂ ಮಹಿಳಾ ಸಿಬಂದಿ ದಾಳಿ ನಡೆಸಿದ ವೇಳೆ ಆರೋಪಿಗಳು ತಪ್ಪಿಸಿಕೊಂಡಿದ್ದು, ಈ ವೇಳೆ ಸ್ಥಳದಲ್ಲಿ ಮಾಂಸ ಹಾಗೂ ಒಂದು ದನವನ್ನು ವಶಪಡಿಸಿಕೊಂಡಿದ್ದು ಈ ವೇಳೆ ಮನೆಯಲ್ಲಿದ್ದ ಮಹಿಳೆಯರು ಏಕಾಏಕಿ ಪೊಲೀಸ್ ಅಧಿಕಾರಿ ಹಾಗೂ ಇತರ ಸಿಬಂದಿ ಮೇಲೆ ದಾಳಿ ನಡೆಸಿದೆ. ಠಾಣಾಧಿಕಾರಿ ರಾಘವೇಂದ್ರ ಅವರ ಮೇಲೆ ನೇರವಾಗಿ ಹಲ್ಲೆ ನಡೆಸಿದ್ದಲ್ಲದೆ, ಅಧಿಕಾರಿಗಳ ವಿರುದ್ದ ಕೆಟ್ಟ ಭಾಷೆಯಲ್ಲಿ ಬೈದು ಅವಮಾನ ಮಾಡಿದ್ದಾರೆ. ಈ ಸಂಬಂಧ ಠಾಣಾಧಿಕಾರಿ ಸಂಬಂಧಿತ ಕುಟುಂಬದ ಮಹಿಳೆಯರ ವಿರುದ್ದ ಹಾಗೂ ತಪ್ಪಿಸಿಕೊಂಡ ಇಬ್ಬರು ಪುರುಷರ ವಿರುದ್ದ ದೂರು ದಾಖಲಿಸಿದ್ದು ಪ್ರಕರಣ ದಾಖಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಘಟನೆಯ ಕುರಿತು ಸಂಪೂರ್ಣ ವೀಡಿಯೋ ದಾಖಲೆ ಇದ್ದು ಕುಟುಂಬದವರ ಮೇಲೆ ಎಲ್ಲಿಯೂ ಪೊಲೀಸರು ದಾಳಿ ನಡೆಸಿಲ್ಲ. ಕಾಪು ಪೊಲೀಸರು ತಮ್ಮ ಕರ್ತವ್ಯವನ್ನು ನಿರ್ವಹಿಸಿದ್ದಾರೆ. ಕುಟುಂಬದವರು ಮಾಡಿರುವ ಆರೋಪದಲ್ಲಿ ಹುರುಳಿಲ್ಲ ಎಂದು ಎಸ್.ಪಿ.ಸ್ಪಷ್ಟಪಡಿಸಿದ್ದಾರೆ.