ಮಂಗಳೂರು: ಪ್ರಕರಣವೊಂದರಲ್ಲಿ ನ್ಯಾಯಾಲಯದಿಂದ ದಸ್ತಗಿರಿ ವಾರಂಟ್ ಜಾರಿಯಾಗಿದ್ದ ಆರೋಪಿಯ ಮನೆಗೆ ಕೋರ್ಟ್ ವಾರಂಟ್ ತಂದವರ ಮೇಲೆ ಕಾರು ಚಲಾಯಿಸಿ ಆರೋಪಿ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಘಟನೆ ಕಟಪಾಡಿ ಅಚ್ಚಡದಲ್ಲಿ ನಡೆದಿದೆ. ಕಟಪಾಡಿ ಅಚ್ಚಡ ನಿವಾಸಿ ಸಾದಿಕ್ ವಾರಂಟ್ ತಂದವರ ಮೇಲೆ ಕಾರು ಚಲಾಯಿಸಿ ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಉಡುಪಿ ಕೋರ್ಟ್‌ನ ಆದೇಶದಂತೆ ಆರೋಪಿ ಸಾದಿಕ್‌ನನ್ನು ಮಾ. 7ರೊಳಗೆ ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಕೋರ್ಟ್ ಸೂಚಿಸಿತ್ತು. ವಾರಂಟ್ ನೀಡಲು ಉಡುಪಿಯ ಕೌಟುಂಬಿಕ ನ್ಯಾಯಾಲಯದ ಬೈಲಿಫ್, ಪ್ರಸ್ತುತ ಉಡುಪಿ ಜಿಲ್ಲಾ ನ್ಯಾಯಾಲಯದಲ್ಲಿ ನಿಯೋಜನೆ ಮೇರೆಗೆ ಕರ್ತವ್ಯ ನಿರ್ವಹಿಸುತ್ತಿರುವ ಸಂಪತ್ ಮತ್ತಿತರರು ಆರೋಪಿಯ ಮನೆಗೆ ತೆರಳಿದ್ದರು ಎನ್ನಲಾಗಿದೆ.
ಆರೋಪಿಗೆ ದಸ್ತಗಿರಿ ವಾರೆಂಟ್‌ನ ವಿಷಯವನ್ನು ತಿಳಿಸಿ ತಮ್ಮೊಂದಿಗೆ ನ್ಯಾಯಾಲಯಕ್ಕೆ ಹಾಜರಾಗುವಂತೆ ತಿಳಿಸಿದಾಗ, ಆತ ನ್ಯಾಯಾಲಯಕ್ಕೆ ಹಾಜರಾಗಲು ಒಪ್ಪದೆ ತನ್ನ ಕಾರಲ್ಲಿ ಕುಳಿತು ಎದುರಿನಲ್ಲಿದ್ದ ಮೂವರ ಮೈಮೇಲೆ ಕಾರು ಚಲಾಯಿಸಿ ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ ಎಂದು ತಿಳಿದು ಬಂದಿದೆ