ಕಾನ್ಪುರ: ಟೀಮ್ ಇಂಡಿಯಾದ ವಿರುದ್ಧದ ಮೊದಲ ಟೆಸ್ಟ್’ನ 2ನೇ ದಿನದಾಟದಲ್ಲಿ ಬೌಲಿಂಗ್ ಹಾಗೂ ಬ್ಯಾಟಿಂಗ್‌ನಲ್ಲಿ ಸಂಪೂರ್ಣ ಪ್ರಾಬಲ್ಯ ಮೆರೆದ ನ್ಯೂಜಿಲೆಂಡ್, ದಿನದಾಟದಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 129 ರನ್ ಕಲೆಹಾಕಿದೆ.
ಕಾನ್ಪುರದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನ ಟೀಮ್ ಇಂಡಿಯಾ 345ರನ್‌ಗಳಿಗೆ ತನ್ನ ಮೊದಲ ಇನ್ನಿಂಗ್ಸ್ ಮುಗಿಸಿದೆ. ಮೊದಲನೇ ದಿನದಾಟದಂತ್ಯಕ್ಕೆ 4 ವಿಕೆಟ್ ನಷ್ಟದಲ್ಲಿ 258 ರನ್’ಗಳಿಸಿದ್ದ ಭಾರತ, ಶುಕ್ರವಾರ, ಕೇವಲ 87 ರನ್ ಸೇರಿಸುವಷ್ಟರಲ್ಲೇ ಸರ್ವ ಪತನ ಕಂಡಿತು.
ಟೀಂ ಇಂಡಿಯಾದ ಮೊದಲ ಇನ್ನಿಂಗ್ಸ್’ನ 345ರನ್‌ಗಳಿಗೆ ಉತ್ತರವಾಗಿ ಉತ್ತಮ ಆರಂಭ ಪಡೆಯುವಲ್ಲಿ ಯಶಸ್ವಿಯಾದ ನ್ಯೂಜಿಲೆಂಡ್ ಯಾವುದೇ ವಿಕೆಟ್ ಕಳೆದುಕೊಳ್ಳದೆ 129 ರನ್ ಗಳಿಸಿದೆ. ಓಪನರ್‌ಗಳಾದ ಟಾಮ್ ಲಥಾಮ್ ಹಾಗೂ ವಿಲ್ ಯಂಗ್ ತಾಳ್ಮೆಯ ಬ್ಯಾಟಿಂಗ್ ನಡೆಸಿ ಭಾರತೀಯ ಬೌಲರ್’ಗಳನ್ನು ಕಾಡಿದರು. 165 ಎಸೆತಗಳನ್ನು ಎದುರಿಸಿದ ಟಾಮ್ ಲಥಾಮ್, ಟೆಸ್ಟ್ ಕ್ರಿಕೆಟ್‌ನಲ್ಲಿ 21ನೇ ಅರ್ಧಶತಕ ದಾಖಲಿಸಿದರು. ಮತ್ತೊಂದೆಡೆ ವೃತ್ತಿ ಜೀವನದ 4ನೇ ಟೆಸ್ಟ್ ಪಂದ್ಯವನ್ನಾಡುತ್ತಿರುವ ವಿಲ್ ಯಂಗ್ 180 ಎಸೆತಗಳನ್ನು ಎದುರಿಸಿ 75 ರನ್’ಗಳಿಸಿ ಶನಿವಾರಕ್ಕೆ ಬ್ಯಾಟಿಂಗ್ ಕಾಯ್ದಿರಿಸಿದರು. ಭಾರತದ 345ರನ್‌ಗಳ ಗುರಿ ತಲುಪಲು ಕಿವೀಸ್ ಇನ್ನೂ 216 ರನ್ ಗಳಿಸಬೇಕಾಗಿದೆ.
ಭಾರತದ ಮೂವರು ಸ್ಪಿನ್ ಹಾಗೂ ಇಬ್ಬರು ವೇಗಿಗಳು ಒಟ್ಟು 57 ಓವರ್ ಎಸೆದರೂ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಲಿಲ್ಲ. ಅದರಲ್ಲೂ ಆರ್.ಆಶ್ವಿನ್ 17 ಹಾಗೂ ಜಡೇಜಾ 14 ಓವರ್’ ಬೌಲಿಂಗ್ ಮಾಡಿದರೂ ನಿರೀಕ್ಷಿತ ಯಶಸ್ಸು ದೊರಯಲಿಲ್ಲ.
258/4…. 345ರನ್‌ಗಳಿಗೆ ಆಲೌಟ್ ..!
ಇದಕ್ಕೂ ಮೊದಲು 4 ವಿಕೆಟ್ ನಷ್ಟದಲ್ಲಿ 258 ರನ್’ಗಳಿಂದ ದಿನದಾಟ ಆರಂಭಿಸಿದ್ದ ಭಾರತ,345 ರನ್‌ಗಳಿಸುವಷ್ಟರಲ್ಲಿ ಆಲೌಟ್ ಆಯಿತು.ಗುರುವಾರ 75 ರನ್ ಗಳಿಸಿದ್ದ ಅಯ್ಯರ್ ಎರಡನೇ ದಿನದಾಟದಲ್ಲಿ ಚೊಚ್ಚಲ ಶತಕ ಗಳಿಸಿ ಸಂಭ್ರಮಿಸಿದರು. 171 ಎಸೆತಗಳನ್ನು ಎದುರಿಸಿದ ಅಯ್ಯರ್, 2 ಸಿಕ್ಸರ್ ಹಾಗೂ 13 ಬೌಂಡರಿಗಳ ನೆರವಿನಿಂದ 105 ರನ್’ಗಳಿಸಿ ಸೌಥಿಗೆ ವಿಕೆಟ್ ಒಪ್ಪಿಸಿದರು. ಈ ಮೂಲಕ ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಶತಕ ಸಿಡಿಸಿದ ಟೀಂ ಇಂಡಿಯಾದ 16 ಬ್ಯಾಟ್ಸ್‌ಮನ್ ಎನಿಸಿದರು. ಮತ್ತೊಂದೆಡೆ 50 ರನ್’ಗಳಿಸಿ ಅಜೇಯರಾಗುಳಿದಿದ್ದ ಜಡೇಜಾ ಎರಡನೇ ದಿನ ಖಾತೆ ತೆರೆಯುವ ಮುನ್ನವೇ ಟಿಮ್ ಸೌಥಿ ಬೌಲಿಂಗ್‌ನಲ್ಲಿ ಕ್ಲೀನ್ ಬೌಲ್ಡ್ ಆದ್ರು. ಬಳಿಕ ಬಂದ ಬ್ಯಾಟರ್’ಗಳು ಕಾನ್ಪುರದಲ್ಲಿ ಪೆವಿಲಿಯನ್ ನಡೆಸಿದರು. ವಿಕೆಟ್ ಕೀಪರ್ ವೃದ್ದಿಮಾನ್ ಸಾಹಾ 1, ಅಕ್ಷರ್ ಪಟೇಲ್ 3ರನ್ ಹಾಗೂ ಇಶಾಂತ್ ಶರ್ಮಾ ಶೂನ್ಯಕ್ಕೆ ನಿರ್ಗಮಿಸಿದರು. ಆದರೆ 56 ಎಸೆತಗಳಲ್ಲಿ 38ರನ್ ಕಲೆಹಾಕಿದ ಆಲ್‌ರೌಂಡರ್ ಆರ್. ಅಶ್ವಿನ್ ಟೀಂ ಇಂಡಿಯಾ ಮೊತ್ತವನ್ನು 300ರ ಗಡಿದಾಟಿಸಿದರು.
ನ್ಯೂಜಿಲೆಂಡ್ ಪರ ಟಿಮ್ ಸೌಥಿ 69 ರನ್ ನೀಡಿ 5 ವಿಕೆಟ್ ಪಡೆದರೆ, ಕೈಲ್ ಜೇಮಿಸನ್ 91 ರನ್‌ಗೆ 3 ಹಾಗೂ ಕೊನೆಯಲ್ಲಿ ಅಜಾಝ್ ಪಟೇಲ್ 2 ವಿಕೆಟ್ ಗಳಿಸಿದರು.