ಕಣ್ಣೂರು| ಮುಸ್ಲಿಂ ಲೀಗ್ ಕಾರ್ಯಕರ್ತನ ಬರ್ಬರ ಹತ್ಯೆ

Prasthutha|

ಕಣ್ಣೂರು; ಕೇರಳ ವಿಧಾನಸಭಾ ಚುನಾವಣೆಗೆ ಮತದಾನ ಮುಕ್ತಾಯಗೊಂಡ ಬೆನ್ನಲ್ಲೇ ಮಂಗಳವಾರ ರಾತ್ರಿ ಕಣ್ಣೂರು ಜಿಲ್ಲೆಯಲ್ಲಿ ಸಿಪಿಐಎಂ ಕಾರ್ಯಕರ್ತರೆನ್ನಲಾದ ತಂಡ ಐಯುಎಂಎಲ್ ಕಾರ್ಯಕರ್ತರೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ.

- Advertisement -


ಕಣ್ಣೂರು ಜಿಲ್ಲೆಯ ಕೂತುಪರಂಬ ಬಳಿಯ ಪನೂರ್ ನಿವಾಸಿ ಪರಲ್ ಮನ್ಸೂರ್ (21) ಹತ್ಯೆಯಾದವರು. ಅವರ ಸಹೋದರ ಮುಹ್ಸಿನ್ (27) ಅವರ ಮೇಲೂ ದಾಳಿಯಾಗಿದ್ದು, ಗಂಭೀರ ಗಾಯಗೊಂಡಿದ್ದಾರೆ.
ಹತ್ಯೆಗೆ ಸಂಬಂಧಿಸಿ ಸಿಪಿಐಎಂ ಕಾರ್ಯಕರ್ತನೊಬ್ಬನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.


ನಿನ್ನೆ ಮತದಾನ ಮುಗಿದ ಒಂದು ಗಂಟೆಯ ನಂತರ ರಾತ್ರಿ 8 ಗಂಟೆ ಸುಮಾರಿಗೆ ತಂಡವೊಂದು ಏಕಾಏಕಿ ಸಹೋದರರ ಮನೆಗೆ ನುಗ್ಗಿ ತಲವಾರು ತಾಳಿ ನಡೆಸಿದೆ. ತೀವ್ರ ಗಾಯಗೊಂಡ ಇಬ್ಬರನ್ನೂ ತಲಶ್ಯೇರಿಯ ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಮನ್ಸೂರು ಅವರು ಮಧ್ಯರಾತ್ರಿಯ ವೇಳೆ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ.
ಸಿಪಿಐಎಂ ಕಾರ್ಯಕರ್ತರು ಮನೆಗೆ ಬಂದು ನಮ್ಮ ಹೆಸರು ಕೇಳಿದರು, ಹೆಸರು ಹೇಳಿದಾಗ ಏಕಾಏಕಿ ಮಾರಕಾಸ್ತ್ರಗಳಿಂದ ದಾಳಿ ನಡೆಸಿದರು ಎಂದು ಮೃತ ಮನ್ಸೂರ್ ಅವರ ಸಹೋದರ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.

- Advertisement -


ಸಿಪಿಐಎಂ ಮತ್ತು ಐಯುಎಂಎಲ್ ಕಾರ್ಯಕರ್ತರ ನಡುವೆ ಪನೂರ್ ಬಳಿಯ ಪುಲ್ಲುಕ್ಕಾರದಲ್ಲಿ ಸೋಮವಾರ ರಾತ್ರಿ ಘರ್ಷಣೆ ಉಂಟಾಗಿ ಸ್ಥಳದಲ್ಲಿ ಉದ್ವಿಗ್ನತೆ ಉಂಟಾಗಿತ್ತು. ಮತದಾನದ ದಿನವೂ ಎರಡೂ ಪಕ್ಷಗಳ ಕಾರ್ಯಕರ್ತರ ನಡುವೆ ವಾಗ್ವಾದ ನಡೆದಿತ್ತು. ಮತದಾನ ಮುಗಿದ ನಂತರ, ಸಿಪಿಐಎಂಗೆ ಸೇರಿದ ತಂಡ, ಸಹೋದರರ ಮನೆಗೆ ಬಾಂಬ್ ಎಸೆದು ಮಾರಕಾಸ್ತ್ರಗಳಿಂದ ದಾಳಿ ನಡೆಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾಂಗ್ರೆಸ್ ನೇತೃತ್ವದ ಯುಡಿಎಫ್ ಕೂತುಪರಂಬ ಕ್ಷೇತ್ರದಲ್ಲಿ ಬುಧವಾರ ಹರತಾಳಕ್ಕೆ ಕರೆ ನೀಡಿದೆ. ಸಿಪಿಐ (ಎಂ) ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಹಿಂಸಾಚಾರದ ಮೊರೆ ಹೋಗಿದೆ ಎಂದು ಪ್ರತಿಪಕ್ಷ ನಾಯಕ ರಮೇಶ್ ಚೆನ್ನಿತ್ತಲ ಆರೋಪಿಸಿದ್ದಾರೆ.

Join Whatsapp