ಬೆಂಗಳೂರು: ಕಾನೂನಿನಲ್ಲಿ ಕನ್ನಡವನ್ನು ತಂದಿದ್ದರಿಂದ ನ್ಯಾಯಾಲಯಗಳಲ್ಲಿ ಇಂದು ಕನ್ನಡ ಹೆಚ್ಚಾಗಿ ಬಳಕೆಯಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯಿಸಿದ್ದಾರೆ.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಇಲಾಖೆ ಹಾಗೂ ಭಾಷಾಂತರ ನಿರ್ದೇಶನಾಲಯ ಹೊರತಂದಿರುವ ಕಾನೂನು ಪದಕೋಶ ಹಾಗೂ 15 ಕೇಂದ್ರ ಅಧಿನಿಯಮಗಳನ್ನು ಇಂದು ಬೆಂಗಳೂರಿನ ವಿಧಾನಸೌಧದಲ್ಲಿ ಲೋಕಾರ್ಪಣೆ ಮಾಡಿ ಮಾತನಾಡುತ್ತಿದ್ದರು.
ಕಾನೂನು ನಿಘಂಟು ಕೆಲಸ ಯಶಸ್ವಿಯಾಗಿದೆ. 2003ರಲ್ಲಿ ಎಲ್ಲಾ ಕಾನೂನುಗಳನ್ನು ಕನ್ನಡಕ್ಕೆ ಭಾಷಾಂತರ ಮಾಡಿದ ನಂತರ ಅವು ಜನ ಸಾಮಾನ್ಯರಿಗೆ ತಲುಪಿದವು. ಕಾನೂನುಗಳ ಅರ್ಥ ವ್ಯಾಪಕವಾಗಿ ಪ್ರಚಾರವಾಯಿತು. ಎಲ್ಲಕ್ಕಿಂತ ಮುಖ್ಯವಾಗಿ ನ್ಯಾಯಾಲಯ ಅದನ್ನು ಗುರುತಿಸಿ ಮನ್ನಣೆಯನ್ನು ನೀಡಿದೆ. ಅದನ್ನು ಮುಂದುವರೆಸಿ ಇಂದು ಕಾನೂನು ಪದಕೋಶ ಹಾಗೂ 15 ಕೇಂದ್ರ ಅಧಿನಿಯಮಗಳನ್ನು ಹೊರತಂದು ಉತ್ತಮ ಕೆಲಸ ಮಾಡಿದೆ ಎಂದರು.
ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದ ಕಾನೂನುಗಳನ್ನು ನಮ್ಮ ಜನರಿಗೆ ಸರಳವಾಗಿ ತಿಳಿಸುವ ಉದ್ದೇಶದಿಂದ ಈ ಮಹತ್ಕಾರ್ಯ ಸಾಧ್ಯವಾಗಿದೆ. ಇದಕ್ಕಾಗಿ ಶ್ರಮಪಟ್ಟಿರುವ ಎಲ್ಲರಿಗೂ ಮುಖ್ಯಮಂತ್ರಿಗಳು ಅಭಿನಂದನೆಗಳನ್ನು ಸಲ್ಲಿಸಿದರು.
ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಅವರ ಪ್ರೋತ್ಸಾಹ, ಬೆಂಬಲದಿಂದ ಇವೆಲ್ಲವನ್ನು ಮಾಡಲು ಸಾಧ್ಯವಾಗಿದೆ ಎಂದ ಅವರು, ಈ ಪ್ರಕ್ರಿಯೆ ಮುಂದುವರೆಯಬೇಕು. ಇನ್ನಷ್ಟು ಕನ್ನಡದ ಪದಗಳು ಕಾನೂನಿನಲ್ಲಿ ಬಳಕೆ ಆಗಬೇಕು ಹಾಗೂ ಕಾನೂನಿನಲ್ಲಿ ಬಳಕೆಯಾಗುವ ಪದಗಳು ಕನ್ನಡದಲ್ಲಿ ಬಳಕೆಯಾಗಬೇಕು ಎಂದರು.
ಇಸ್ಕಾನ್ ದಕ್ಷಿಣ ಶಾಖಾಧ್ಯಕ್ಷ ಶ್ರೀ ವರದಕೃಷ್ಣದಾಸ, ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಮೊದಲಾದವರು ಉಪಸ್ಥಿತರಿದ್ದರು.