ಮಕ್ಕಳಲ್ಲಿ ಭಾಷಾ ತಾರತಮ್ಯಕ್ಕೆ ಅಧಿಕಾರಿಗಳು ಮುಂದಾಗಬಾರದು: ಕನ್ನಡ ಸಾಹಿತ್ಯ ಪರಿಷತ್ತು ಆಗ್ರಹ

Prasthutha|

ಬೆಂಗಳೂರು: ಕೇಂದ್ರ ಸರಕಾರದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಒಂದು ಭಾರತ ಶ್ರೇಷ್ಠ ಭಾರತʼ ಎನ್ನವ ಕಾರ್ಯಕ್ರಮದ ಅಡಿಯಲ್ಲಿ ಪ್ರೌಢಶಾಲಾ ಮತ್ತು ಪದವಿಪೂರ್ವ ವಿದ್ಯಾರ್ಥಿಗಳಿಗೆ ಹೊರ ರಾಜ್ಯಗಳ ಪ್ರವಾಸಕ್ಕೆ ಕರೆದುಕೊಂಡು ಹೋಗುವಲ್ಲಿ ಹಿಂದಿ ಭಾಷೆ ಬಲ್ಲ ವಿದ್ಯಾರ್ಥಿಗಳಿಗೆ ಮಾತ್ರ ಆಧ್ಯತೆ ನೀಡಲಾಗಿದೆ ಎಂದು ಮಾಧ್ಯಮದಲ್ಲಿ ವರದಿಯಾಗಿದೆ. ಶಿಕ್ಷಣ ಇಲಾಖೆಯ ಅಧಿಕಾರಿಗಳು ಈ ರೀತಿಯಲ್ಲಿ ಮಕ್ಕಳಲ್ಲಿ ಭಾಷಾ ಗೊಂದಲಕ್ಕೆ ಕಾರಣವಾಗುವಂತಹ ಕ್ರಮ ಕೈಗೊಂಡಿರುವುದನ್ನು ಕನ್ನಡ ಸಾಹಿತ್ಯ ಪರಿಷತ್ತು ತೀವ್ರವಾಗಿ ಖಂಡಿಸುತ್ತದೆ ಎಂದು *ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಹೇಳಿಕೆ ನೀಡಿದ್ದಾರೆ.

- Advertisement -

ಮಕ್ಕಳ ಆಯ್ಕೆಯಲ್ಲಿ ಹಿಂದಿ ಭಾಷೆ ಬಲ್ಲವರಿಗೆ ಮಾತ್ರ ಅವಕಾಶ ಎನ್ನುವುದು ಸರಿಯಲ್ಲ. ರಾಜ್ಯದಲ್ಲಿ ಆಡಳಿತ ಭಾಷೆ ಕನ್ನಡ ಇರುವಾಗ ʻಆಜಾದಿ ಕಾ ಅಮೃತ್ ಮಹೋತ್ಸವʼ ಎನ್ನುವ ಹಿಂದಿ ಶಿರ್ಷೀಕೆಯನ್ನು ಕನ್ನಡ ಅನುವಾದ ಮಾಡಿ ʻಸ್ವಾತಂತ್ರೋತ್ಸವದ ಅಮೃತ ಮಹೋತ್ಸವʼ ಎಂದು ಕನ್ನಡದಲ್ಲಿ ಬಳಸಲಾಗುತ್ತಿದೆ. ಇಷ್ಟಿದ್ದಾಗಲೂ ಅಧಿಕಾರಿಗಳ ಈ ಕ್ರಮ ಕನ್ನಡ ವಿರೋಧಿ ಎನ್ನುವಂತಿದೆ. ಹೀಗೆ ಮಾಡುವುದರಿಂದ ಮಕ್ಕಳಲ್ಲಿ ಭಾಷಾ ಕಿಳರಿಮೆಗೆ ಕಾರಣವಾಗುತ್ತಿದೆ. ಕನ್ನಡದ ಮಕ್ಕಳು ಕೇಂದ್ರ ಸರಕಾರದ ಇಂತಹ ಯೋಜನೆಗಳಿಂದ ವಂಚಿತರಾಗುತ್ತಾರೆ ಎಂದು ನಾಡೋಜ ಡಾ. ಮಹೇಶ ಜೋಶಿಯವರು ಬೇಸರ ವ್ಯಕ್ತಪಡಿಸಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್ತು ಈ ಬಗ್ಗೆ ಶಿಕ್ಷಣ ಇಲಾಖೆಗೆ ಪತ್ರ ಬರೆಯುವ ಮೂಲಕ ಭಾಷಾ ತಾರತಮ್ಯವನ್ನು ಮಕ್ಕಳಲ್ಲಿ ಮಾಡಬಾರದು ಎಂದು ಆಗ್ರಹಿಸುತ್ತಿದೆ. ಹಿಂದಿ ಬಲ್ಲ ಮಕ್ಕಳನ್ನೆ ಕೇಂದ್ರ ಸರಕಾರ ಆಯೋಜಿಸುತ್ತಿರುವ ಪ್ರವಾಸಕ್ಕೆ ಆಯ್ಕೆ ಮಾಡಿ ಎಂಬ ಆದೇಶವನ್ನು ತಕ್ಷಣ ಹಿಂಪಡೆಯಬೇಕು. ಕನ್ನಡದ ಮಕ್ಕಳಿಗೆ ಎಲ್ಲಿಯೂ ಅನ್ಯಾಯ ಆಗದಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಕನ್ನಡ ಶಾಲೆಗಳು ಉಳಿದರೆ ಕನ್ನಡ ಉಳಿಯುತ್ತದೆ. ಈ ಹಿನ್ನೆಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಮಾಧ್ಯಮ ಉಳಿವಿಗೆ ಹೋರಾಡುತ್ತಲೇ ಬಂದಿದೆ. ಇತ್ತೀಚಿಗೆ ಕನ್ನಡಶಾಲೆಗಳ ಉಳಿವಿಗಾಗಿ ಹಿರಿಯ ಸಾಹಿತಿ ಡಾ. ಎಸ್.ಎಲ್. ಭೈರಪ್ಪ ಅವರ ನೇತೃತ್ವದಲ್ಲಿ ರಾಜ್ಯದ ಪ್ರಮುಖ ಶಿಕ್ಷಣ ತಜ್ಞರ ದುಂಡು ಮೇಜಿನ ಸಭೆಯನ್ನು ನಡೆಸಿ ಕನ್ನಡ ಶಾಲೆಗಳ ಉಳಿವಿಗಾಗಿ ಸರಕಾರ ಹಾಗೂ ಸಾರ್ವಜನಿಕರು ಏನೆಲ್ಲಾ ಮಾಡಬೇಕು ಎನ್ನುವ ಮಹತ್ವದ ಚರ್ಚೆಯನ್ನು ಸ್ವತಃ ಶಿಕ್ಷಣ ಸಚಿವರ ಸಮ್ಮುಖದಲ್ಲಿಯೇ ಮಾಡಲಾಗಿದೆ.

- Advertisement -

ಅಧಿಕಾರಿಗಳು ಈ ರೀತಿಯ ಭಾಷಾ ವಿಷಯದಲ್ಲಿ ಗೊಂದಲ ಸೃಷ್ಟಿಮಾಡಬಾರದು ಹಾಗೂ ಬೇಜವಾಬ್ದಾರಿ ತನದಿಂದ ಕೆಲಸ ಮಾಡುವುದು ಸರಿಯಲ್ಲ. ತಕ್ಷಣವೆ ಈ ಗೊಂದಲಕ್ಕೆ ತೆರೆ ಎಳೆದು ಕನ್ನಡ ವಿದ್ಯಾರ್ಥಿಗಳಿಗೆ ಅನ್ಯಾಯ ಆಗದಂತೆ ನೋಡಿಕೊಳ್ಳಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತು ಆಗ್ರಹಿಸುತ್ತಿದೆ ಎಂದು ನಾಡೋಜ ಡಾ. ಮಹೇಶ ಜೋಶಿ ತಿಳಿಸಿದ್ದಾರೆ.



Join Whatsapp