Home ಟಾಪ್ ಸುದ್ದಿಗಳು ರಾಜ್ಯೋತ್ಸವ ಪ್ರಶಸ್ತಿ ಪ್ರಕಟ: 67 ಸಾಧಕರಿಗೆ ಗೌರವ

ರಾಜ್ಯೋತ್ಸವ ಪ್ರಶಸ್ತಿ ಪ್ರಕಟ: 67 ಸಾಧಕರಿಗೆ ಗೌರವ

ಬೆಂಗಳೂರು : ಅರವತ್ತೇಳನೇ ಕನ್ನಡ ರಾಜ್ಯೋತ್ಸವ ನಿಮಿತ್ತವಾಗಿ ರಾಜ್ಯದ ಪ್ರಮುಖ ಸಾಹಿತಿಗಳು, ತೆರೆಮರೆಯ ಸಾಧಕರು, ಕ್ರೀಡಾ ಪಟುಗಳು ಸಮಾಜ ಸೇವಕರು ಸೇರಿದಂತೆ 67 ಜನರಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ರಾಜ್ಯ ಸರಕಾರ ಘೋಷಣೆ ಮಾಡಿದೆ. ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಗಣನೀಯ ಸೇವೆ ಸಲ್ಲಿಸಿದ 10 ಸಂಘ-ಸಂಸ್ಥೆಗಳನ್ನೂ ಸರ್ಕಾರ ಗುರುತಿಸಿದೆ.


ಪದ್ಮ ಪ್ರಶಸ್ತಿ ಮಾದರಿಯಲ್ಲಿ ಈ ವರ್ಷ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆಯಲ್ಲೂ ಹೊಸತನವನ್ನು ಮೆರೆದಿದ್ದು, ಸಾಮಾನ್ಯರಾಗಿದ್ದುಕೊಂಡು ಅಸಾಮಾನ್ಯ ಕೆಲಸ ಮಾಡಿದವರು, ಸಮಾಜದ ನಾನಾ ಕ್ಷೇತ್ರಗಳಲ್ಲಿ ಅದ್ವಿತೀಯ ಸಾಧನೆ ಮಾಡಿದವರು, ತೆರೆಮರೆಯಲ್ಲಿದ್ದ ಅರ್ಹ ಸಾಧಕರು, ಸಮಾಜದ ಹಿತಕ್ಕಾಗಿ ಗಣನೀಯ ಸೇವೆ ಸಲ್ಲಿಸಿದ ಹತ್ತು ಸಂಘ-ಸಂಸ್ಥೆಗಳನ್ನು ಸರಕಾರ ಗುರುತಿಸಿದೆ. ಸಾಧಕರನ್ನು ರಾಜ್ಯೋತ್ಸವ ಆಯ್ಕೆ ಸಮಿತಿ ಹಾಗೂ ಸರಕಾರವೇ ಗುರುತಿಸಿ ನೀಡಿರುವುದು ಈ ಬಾರಿಯ ವಿಶೇಷ.
ಈ ಬಾರಿ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿಯನ್ನು ಪರಿಗಣಿಸುವುದಿಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ ಸುನಿಲ್‌ ಕುಮಾರ್‌ ಮೊದಲೇ ಪ್ರಕಟಿಸಿದ್ದರು. ಆದಾಗಿಯೂ ಸಾಕಷ್ಟು ಅರ್ಜಿಗಳು ಬಂದಿದ್ದವು. ಈ ಪಟ್ಟಿಯಲ್ಲಿರುವ ಕೆಲ ಸಾಧಕರನ್ನೂ ಆಯ್ಕೆ ಸಮಿತಿ ಪರಿಗಣಿಸಿದ್ದು, ಒಟ್ಟಾರೆಯಾಗಿ ಸಮತೂಕದ ಪಟ್ಟಿ ಸಿದ್ದಗೊಂಡಿದೆ.
ಇಸ್ರೋ ಮಾಜಿ ನಿರ್ದೇಶಕ ಶಿವನ್‌, ಹಿರಿಯ ಸಾಹಿತಿ ಅ.ರಾ.ಮಿತ್ರ, ಪ್ರೊ.ಕೃಷ್ಣೇಗೌಡ, ಇಂಗ್ಲೀಷ್‌ ಕಡಲ್ಗಾಲುವೆ ಈಜಿದ ವಿಕಲಚೇತನ ಕ್ರೀಢಾಪಟು ರಾಘವೇಂದ್ರ ಅಣ್ವೇಕರ್‌, ನಿವೃತ್ತ ಐಎಎಸ್‌ ಅಧಿಕಾರಿ ಮದನ್‌ ಗೋಪಾಲ್‌, ಸೋಲಿಗ ಸಮುದಾಯದಲ್ಲಿ ಸಹಕಾರದ ಬೆಳಕು ಚೆಲ್ಲಿದ ಸೋಲಿಗರ ಮಾದಮ್ಮ, ವನಸಂರಕ್ಷಣೆಗಾಗಿ ಜೀವನವನ್ನೇ ಮುಡುಪಾಗಿಟ್ಟ ರಾಮನಗರದ ಸಾಲುಮರದ ನಿಂಗಣ್ಣ, ಹಿರಿಯ ಚಲನಚಿತ್ರನಟರಾದ ದತ್ತಣ್ಣ, ಅವಿನಾಶ್‌, ಪೌರ ಸೇನಾನಿ ಶ್ರೀಮತಿ ಮಲ್ಲಮ್ಮ, ಉಡುಪಿ ಜಿಲ್ಲೆಯ ದೈವನರ್ತಕ ಗುಡ್ಡ ಪಾಣಾರ, ಕಿರುತೆರೆ ನಟ ಸಿಹಿಕಹಿ ಚಂದ್ರು, ಯಕ್ಷಗಾನ ಕಲಾವಿದರಾದ ಡಾ. ಎಂ.ಪ್ರಭಾಕರ ಜೋಷಿ, ಸುಬ್ರಹ್ಮಣ್ಯ ಧಾರೇಶ್ವರ, ವೀರಗಾಸೆ ಕಲಾವಿದ ಹಾವೇರಿಯ ಮಹೇಶ್ವರ ಗೌಡ ಲಿಂಗದಹಳ್ಳಿ, ಕಮಲಮ್ಮ ಸೂಲಗಿತ್ತಿ, ಹಿರಿಯ ಸಂಗೀತ ವಿದ್ವಾಂಸ ಅನಂತಾಚಾರ್ಯ ಬಾಳಾಚಾರ್ಯ, ಹಿರಿಯ ಪತ್ರಕರ್ತರಾದ ಎಚ್.ಆರ್. ಶ್ರೀಶ, ಜಿ.ಎಂ.ಶಿರಹಟ್ಟಿ, ಹಿರಿಯ ಸಂಶೋಧಕ ಡಾ.ಎಂ.ಜಿ.ನಾಗರಾಜ್‌ ಸೇರಿದಂತೆ 67 ಜನರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.


ಜನಸಾಮಾನ್ಯಗೆ ಸಮ್ಮಾನ :
ತೆರೆಮರೆಯಲ್ಲಿ ಸಾಧನೆ ಮಾಡಿದ ಜನಸಾಮಾನ್ಯರನ್ನು ಗುರುತಿಸುವಲ್ಲಿ ರಾಜ್ಯೋತ್ಸವ ಸಮಿತಿ ವಿಶೇಷ ಗಮನ ನೀಡಿದೆ. ಚಾಮರಾಜನಗರದ ಸೋಲಿಗರ ಮಾದಮ್ಮ, ಪೌರ ಸೇನಾನಿ ಶ್ರೀಮತಿ ಮಲ್ಲಮ್ಮ, ಉಡುಪಿಯ ದೈವನರ್ತಕ, ಗುಡ್ಡ ಪಾಣಾರ, ಪರಿಸರ ಸಂರಕ್ಷಕ ಸಾಲುಮರದ ನಿಂಗಣ್ಣ, ಗೊಲ್ಲ ಸಮುದಾಯದ ಡಾ.ಕರಿಯಪ್ಪ, ಮುಖವೀಣೆ ಕಲಾವಿದ ಅಂಜನಪ್ಪ ಸತ್ಪಾಡಿ ಅವರನ್ನು ಆಯ್ಕೆ ಮಾಡಲಾಗಿದೆ.
ಅಸಾಮಾನ್ಯ ಸಾಧಕರು :
ಸಾಮಾಜದ ನಾನಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಗುರುತಿಸುವಲ್ಲೂ ಸಮಿತಿ ವಿಶೇಷ ಆಸಕ್ತಿ ನೀಡಿದೆ. ಈ ಪಟ್ಟಿಯಲ್ಲಿ ಇಸ್ರೋ ಮಾಜಿ ನಿರ್ದೇಶಕ ಶಿವಂ, ಸಾಹಿತಿ ಪ್ರೊ.ಕೃಷ್ಣೇಗೌಡ, ಅ.ರಾ.ಮಿತ್ರ, ವಿಭಿನ್ನ ಪಾತ್ರಗಳ ಮೂಲಕ ಚಲನಚಿತ್ರ ರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ ದತ್ತಣ್ಣ, ಅವಿನಾಶ, ಕಿರುತೆರೆ ದಿಗ್ಗಜ ಸಿಹಿಕಹಿ ಚಂದ್ರು, ಇಂಗ್ಲೀಷ್‌ ಕಡಲ್ಗಾಲುವೆ ಈಜಿದ ಪ್ಯಾರಾ ಒಲಂಪಿಕ್‌ ಕ್ರೀಡಾಪಟು ರಾಘವೇಂದ್ರ ಅಣ್ವೇಕರ್‌, ದಲಿತ ಯುವಕರನ್ನು ಉದ್ಯಮಿಯಾಗಿ ರೂಪಿಸುವಲ್ಲಿ ಅವಿರತ ಶ್ರಮಿಸಿದ ಕೋಲಾರದ ಉದ್ಯಮಿ ಜೆ,ಶ್ರೀನಿವಾಸನ್‌, ಶಿಕ್ಷಣ ತಜ್ಞ ಸುಬ್ಬರಾವ್‌ ಶೆಟ್ಟಿ ಅವರನ್ನು ಪ್ರಶಸ್ತಿ ನೀಡಲಾಗಿದೆ.
ಪ್ರಶಸ್ತಿಗೆ ಆಯ್ಕೆ ಮಾಡುವ ಸಂದರ್ಭದಲ್ಲಿ ಜಾತಿ, ಪ್ರಾದೇಶಿಕ ನ್ಯಾಯ ಸೇರಿದಂತೆ ಎಲ್ಲ ಆಯಾಮಗಳನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ.
ಸ್ವಾತಂತ್ರ್ಯ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಹತ್ತು ಸಮಾಜ ಸೇವಾ ಸಂಘಟನೆಗಳನ್ನು ಈ ವರ್ಷದ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಮೈಸೂರಿನ ರಾಮಕೃಷ್ಣ ಆಶ್ರಮ, ಬೆಂಗಳೂರಿನ ಅಮೃತ ಶಿಶು ನಿವಾಸ, ಸುಮನಾ ಪೌಂಡೇಶನ್‌, ಹಾವೇರಿಯ ಅಗಡಿ ಫಾರ್ಮ್ಸ್‌ , ಗದಗ ಜಿಲ್ಲೆಯ ಲಿಂಗಾಯತ ಪ್ರಗತಿಶೀಲ ಸಂಸ್ಥೆ ಸೇರಿದಂತೆ ಹತ್ತು ಸಾಮಾಜಿಕ ಸಂಘಟನೆಯನ್ನು ಆಯ್ಕೆ ಮಾಡಲಾಗಿದೆ.

ಸಾಧಕರನ್ನು ಗುರುತಿಸಲಾಗಿದೆ: ಸುನಿಲ್ ಕುಮಾರ್

ಈ ವರ್ಷದ ರಾಜ್ಯೋತ್ಸವ ಪಟ್ಟಿ ಅತ್ಯಂತ ಸಮತೋಲಿತವಾಗಿದ್ದು, ಎಲೆಮರೆಯ ಸಾಧಕರನ್ನು ಗುರುತಿಸಲಾಗಿದೆ. ಎಲ್ಲ ಆಯಾಮಗಳಲ್ಲೂ ಅಳೆದು-ತೂಗಿ ಆಯ್ಕೆ ಪ್ರಕ್ರಿಯೆ ಪೂರ್ಣಗೊಳಿಸಿದ್ದೇವೆ. ಅಸಾಮಾನ್ಯ ಸಾಧನೆ ಮಾಡಿದ ಶ್ರೀಸಾಮಾನ್ಯರು, ಅರ್ಹ ಸಾಧಕರನ್ನು ಗುರುತಿಸಿದ್ದೇವೆ. ಒಂದರ್ಥದಲ್ಲಿ ಕೇಂದ್ರ ಸರ್ಕಾರದ ಪದ್ಮ ಪ್ರಶಸ್ತಿ ಮಾದರಿಯಲ್ಲಿ ಆಯ್ಕೆ ಪ್ರಕ್ರಿಯೆ ನಡೆದಿದೆ. ನಾವು ಆಯ್ಕೆ ಮಾಡಿದ ವ್ಯಕ್ತಿಗಳಲ್ಲಿ ಕೆಲವು ಸಾಧಕರು ಎಷ್ಟು ಮುಗ್ಧರಾಗಿದ್ದರೆಂದರೆ ನಿಮ್ಮ ಫೋಟೋ ಕೊಡಿ ಎಂದಾಗ, ಇಲ್ಲ ಎಂದು ಹೇಳಿದ್ದರು. ಅಷ್ಟರ ಮಟ್ಟಿಗೆ ಅವರು ತಮ್ಮ ತಮ್ಮ ಕ್ಷೇತ್ರದಲ್ಲಿ ಪ್ರಚಾರ ಬಯಸದೇ ಕಾರ್ಯ ಸಾಧಕರಾಗಿದ್ದರು. ಇಂಥವರನ್ನು ಆಯ್ಕೆ ಮಾಡಿದ್ದೇವೆ ಎಂದು ಹೇಳುವುದಕ್ಕೆ ಅಭಿಮಾನವಾಗುತ್ತದೆ. ದೈವ ನರ್ತಕರು ಹಾಗೂ ವೀರಗಾಸೆ ಕಲಾವಿದರು, ಪೌರ ಸೇನಾನಿಗಳನ್ನು ಗೌರವಿಸಿದ್ದೇವೆ. ಈ ಆಯ್ಕೆಯಿಂದ ಪ್ರಶಸ್ತಿಯ ಮೌಲ್ಯ ನಿಜಕ್ಕೂ ಹೆಚ್ಚಿದೆ ಎಂದು ಸಚಿವ ವಿ ಸುನಿಲ್‌ ಕುಮಾರ್‌ ತಿಳಿಸಿದ್ದಾರೆ.

Join Whatsapp
Exit mobile version