ಕನ್ನಡ ಭಾಷೆಯನ್ನು ವಿಶ್ವದೆಲ್ಲೆಡೆ ಪಸರಿಸುವ ಕೆಲಸವಾಗಬೇಕು: ಬಿ.ಪಿ. ವೀರಭದ್ರಪ್ಪ

Prasthutha|

ಬೆಂಗಳೂರು: “ಹಂಪನಾ ಅವರ ಸಂಪುಟ ಪ್ರಪಂಚದ ಐದು ಕಡೆಗಳಲ್ಲಿ ಬಿಡುಗಡೆ ಆಗುತ್ತಿರುವುದು ಹೆಮ್ಮೆಯ ವಿಚಾರ. ಹಂಪನ ಅವರು ದೊಡ್ಡ ದಾರ್ಶನಿಕ, ವಿದ್ವಾಂಸರು. ಇವರ ಬರಹಗಳು ಕುವೆಂಪು ಅವರ ಲೇಖನಗಳಿಗೆ ಸಮಾನಾಂತರವಾಗಿ ನಿಲ್ಲುತ್ತದೆ” ಎಂದು ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ.ಪಿ. ವೀರಭದ್ರಪ್ಪ ಅಭಿಪ್ರಾಯಪಟ್ಟರು.

- Advertisement -

ಇವರು, ಶಂಕರಘಟ್ಟದ ಕುವೆಂಪು ವಿಶ್ವವಿದ್ಯಾಲಯ ಮತ್ತು ಬೆಂಗಳೂರಿನ ಸಪ್ನ ಬುಕ್ ಹೌಸ್ ಇವರ ಜಂಟಿ ಆಶ್ರಯದಲ್ಲಿ ಬುಧವಾರ ನಡೆದ ಆಚಾರ್ಯ ಹಂಪನಾ ವಿರಚಿತ ಇಂಗ್ಲೀಷ್ ಕೃತಿ `Spectrum of Classical Literature in Karnataka-5 ಕರ್ನಾಟಕದ ಅಭಿಜಾತ ಸಾಹಿತ್ಯದ ಇಂದ್ರಚಾಪ: ಒಂದು ಅನುಸಂಧಾನ’ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ವಿಶ್ವದಾದ್ಯಂತ ಕನ್ನಡ ಭಾಷೆ, ಇಲ್ಲಿನ ಸಂಸ್ಕೃತಿ, ಸೊಗಡು ಜಾಗತಿಕ ಮಟ್ಟದಲ್ಲಿ ಗುರುತಿಸಲು ಹಂಪನಾ ಅವರು ಕಾರಣ. ಹಂಪನಾ ಅವರಂತೆ ಕನ್ನಡವನ್ನು ಇಂಗ್ಲೀಷ್ಗೆ ಪರಿಚಯಿಸುವ ಕೆಲಸ ಆಗಬೇಕು. ಕುವೆಂಪು ಪ್ರತಿಷ್ಠಾನದಲ್ಲಿ ಈ ಪ್ರಯತ್ನವನ್ನು ಮಾಡಲಾಗುವುದು. ಹಂಪನಾ ಅವರು ಕುವೆಂಪು ಅವರ ಲೇಖನಗಳಿಂದ ಪ್ರಭಾವಿತರಾದವರು. ಕುವೆಂಪು ಅವರು ನಾಡಿಗೆ ನೀಡಿದ ಚಿಂತನೆಗಳು ಅಪಾರ. ಅವರು ನಮಗೆ ವಿಶ್ವಮಾನವ ಸಂದೇಶಗಳನ್ನು, ಅದರ ರೂಪವನ್ನು ನೀಡಿದ್ದಾರೆ. ಹಾಗಾಗಿ ಕುವೆಂಪು, ಹಂಪನಾ ಅವರ ಚಿಂತನೆಗಳು, ಸಾಹಿತ್ಯ ಇಡೀ ಕರುನಾಡಿಗೆ ದೊರಕುವ ಕೆಲಸ ಆಗಬೇಕಾಗಿದೆ. ಅದಕ್ಕಾಗಿ ಪ್ರಯತ್ನಿಸುತ್ತೇವೆ ಎಂದರು. ಬಳಿಕ ವಿದ್ಯಾರ್ಥಿಗಳನ್ನು ಉದ್ದೇಶಿಸಿ, ನಿಮಗೆ ಕನ್ನಡ ದಿಗ್ಗಜರ ಪ್ರೇರೇಪಣೆ ಆಗಲಿ. ನಿಮ್ಮಲ್ಲೂ ಸಾಹಿತ್ಯದ ಅಭಿರುಚಿ ಮೂಡಬೇಕು ಎಂದು ಕರೆ ನೀಡಿದರು.

- Advertisement -

ವಿಮರ್ಶಕ, ಸಂಸ್ಕೃತಿ ಚಿಂತಕ ಪ್ರೊ. ಪಿ.ವಿ. ನಾರಾಯಣ ಕೃತಿಯ ಕುರಿತು ಮಾತನಾಡಿ, ಎರಡನೇ ಸಂಪುಟದಲ್ಲಿ ಪಂಪಾ ನಂತರದ ಚಂಪೂ ಕವಿಗಳು ವಿಶೇಷವಾಗಿ ಮೊದಲನೆಯ ಭಾಗಕ್ಕೆ ಸಂಬಂಧಪಟ್ಟಿರುವಂತಹ ಕವಿಗಳನ್ನು ಕುರಿತು ಹಂಪನಾ ಅವರು ಮಾಡಿರುವ ವಿವೇಚನೆ ಮತ್ತು ಅವರು ಮಾಡಿರುವ ಮುಖ್ಯವಾದ ಕೆಲಸ ಕನ್ನಡ ಭಾಷೆಯನ್ನು ಬೇರೆ ಭಾಷೆಗಳಿಗೆ ಪರಿಚಯಮಾಡಿಕೊಟ್ಟದ್ದು. 150 ವರ್ಷಗಳ ಹಿಂದೆಯೇ ಕನ್ನಡೇತರರು, ಪಾಶ್ಚಾತ್ಯರಿಂದ ಆರಂಭವಾದ ಅನುವಾದ ಕ್ರಿಯೆಯು ಇನ್ನೂ ಮುಂದುವರಿಯಬೇಕು. ಕನ್ನಡದ ಬೆಳವಣಿಗೆಯನ್ನು ಪ್ರಪಂಚಕ್ಕೆ ತಿಳಿಸಬೇಕಾದುದು ಅನಿವಾರ್ಯ. ಅದನ್ನು ಹಂಪನಾ ಅವರು ಕೈಗೊಂಡಿದ್ದಾರೆ. ಇವರು ಬರೀ ಪುಸ್ತಕ ಬರೆಯುವುದು ಮಾತ್ರವಲ್ಲ, ಪ್ರಪಂಚದ ಬೇರೆ ಬೇರೆ ಕಡೆಗಳಲ್ಲಿ ಅದನ್ನು ಬಿಡುಗಡೆ ಮಾಡಿ ಅದರ ನೇರ ಪರಿಚಯವನ್ನು ಕೆಲವರಿಗಾದರೂ ಮಾಡಿಕೊಟ್ಟು ಅದರ ಪ್ರಯೋಜನವನ್ನು ಓದುಗರು ಪಡೆಯುವಂತೆ ಮಾಡಿದ್ದಾರೆ ಎಂದು ಹೇಳಿದರು.

ವಿಮರ್ಶಕ ಹಾಗೂ ಚಿಂತಕ ಪ್ರೊ. ಬಸವರಾಜ ಕಲ್ಗುಡಿ ಮಾತನಾಡಿ, ಹಂಪನಾ ಅವರು ಹಳೆಗನ್ನಡದಲ್ಲಿ ದೊಡ್ಡ ವಿದ್ವಾಂಸರು. ಕನ್ನಡದಲ್ಲಿ ಬೆರಳೆಣಿಕೆಯಲ್ಲಿ ಇಂತಹ ವಿದ್ವಾಂಸರನ್ನು ಗುರುತಿಸಬಹುದಷ್ಟೇ. ಹಂಪನಾ ಅವರು ಬರೆದ ಎಲ್ಲಾ ಹಳೆಗನ್ನಡದ ಜೈನ ವಾಸ್ತು, ಜೈನ ಕೃತಿಗೆ ಸಂಬಂಧಪಟ್ಟ ಲೇಖನ, ಕೃತಿಗಳನ್ನು ಬಹಳ ಕುತೂಹಲದಿಂದ ಓದುತ್ತೇನೆ. ಅವರು ಕನ್ನಡದ ದೊಡ್ಡ ಸಂಪನ್ಮೂಲ. ಜೈನ ತತ್ವಕ್ಕೆ ಉತ್ಕಟವಾದ ಲೋಕ ಬದುಕಿನ ಗುಣ ಇದೆ. ಅದರಂತೆ ಆನಂದವಾಗಿ ಬದುಕುವ ಗುರು ಇವರು. ಈ ಕೃತಿಯ ಶೀರ್ಷಿಕೆ ಕ್ಲಾಸಿಕಲ್ ಲಿಟರೇಚರ್ ನ್ನು ವ್ಯಾಖ್ಯಾನ ಮಾಡದಿದ್ದರೂ ತಾವು ಆಯ್ದುಕೊಂಡ ಕೃತಿಗಳ ಮೂಲಕವೇ ಯಾವುದನ್ನು ಕ್ಲಾಸಿಕಲ್ ಎಂದು ಕರೆಯುತ್ತಾರೆ ಅದರ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ದಕ್ಕೆ ಇವರೊಳಗೆ ತಮ್ಮದೇ ಆದ ಪರಿಕಲ್ಪನೆ ಇದೆ. ಈ ಕೃತಿಯಲ್ಲಿ 19 ಕವಿಗಳ ಬಗ್ಗೆ ಹೇಳಲಾಗಿದೆ. ಒಟ್ಟು ಸಂಪುಟಗಳನ್ನು ನೋಡಿದಾಗ ನಮ್ಮ ಕನ್ನಡದ ಪ್ರಾರಂಭದ ರಚನೆಯ ಜೈನ ದರ್ಶನ ಹೇಗಿತ್ತು, ಜೈನ ಕಾವ್ಯದ ಸ್ವರೂಪ ಹೇಗಿತ್ತು, ತತ್ವ ಲೋಕಾರೂಢಿಯಲ್ಲಿ ಹೇಗೆ ಬಳಕೆಯಾಗಿತ್ತು ಹೀಗೆ ಅನೇಕ ಸಂಗತಿಗಳಿಗೆ ವಿಶೇಷ ಸ್ಥಾನ ಇದೆ. ಇನ್ನು ಶೆರ್ಡನ್ ಪೊಲೊಕ್ ಅವರು ಹೇಳುವ ಮಾತನ್ನು ಅತೀ ನಯವಾಗಿ ಒಪ್ಪಿಯೂ ಒಪ್ಪದ ಹಾಗೆ ಒಂದು ಮಾತನ್ನು ಹೇಳುತ್ತಾರೆ. ಇದು 10ನೆಯ ಶತಮಾನದ ವೀರ ಮೌಲ್ಯದ ಭಾಷೆಯಾಗಬೇಕಾಗಿತ್ತು. ಓದಲು ಬಹಳ ಸಂತೋಷವನ್ನು ನೀಡಿದ ಕೃತಿ ಇದು” ಎಂದರು.

ಅಂಕಣಕಾರ, ಸಂಸ್ಕೃತಿ ಚಿಂತಕ ಡಾ. ಪದ್ಮರಾಜ ದಂಡಾವತಿ ಕೃತಿಯ ಕುರಿತು, ನಾಲ್ಕನೇ ಸಂಪುಟದಲ್ಲಿ ಹಂಪಾ ಅವರು ಕನ್ನಡದ ಕವಿಗಳು, ಸಂಸ್ಕೃತ- ಪ್ರಾಕೃತ ಮತ್ತು ಅಪಪ್ರವಿಶ್ಯ ಭಾಷೆಯಲ್ಲಿ ಮಾಡಿರುವ ಸಾಹಿತ್ಯ ಸೇವೆಯೆ ಕುರಿತು ಮಾತನಾಡಿದ್ದಾರೆ. ಇಂಗ್ಲೀಷ್ ಅಧ್ಯಾಪಕರಲ್ಲಿ ಹೆಚ್ಚು ಜನ ಕನ್ನಡದಲ್ಲೇ ಬಹಳ ಚೆನ್ನಾಗಿ ಬರೆದಿದ್ದಾರೆ. ಇವರ ಮಧ್ಯೆ ಹಂಪನಾ ಅವರು ಅಪವಾದ ಎನ್ನುವ ಹಾಗೆ ಇದ್ದಾರೆ. ಮೂಲತಃ ಕನ್ನಡ ಅಧ್ಯಾಪಕರಾಗಿ ಇಂಗ್ಲೀಷ್, ಸಂಸ್ಕೃತ, ಪ್ರಾಕೃತದ ಮೇಲೆ ಪ್ರಭುತ್ವ ಇರುವವರಾಗಿದ್ದು ಈ ಭಾಷೆಗಳನ್ನು ಪ್ರಪಂಚದಾದ್ಯಂತ ಇರುವ ಯೂನಿವರ್ಸಿಟಿಗೆ ತೆಗೆದುಕೊಂಡು ಹೋದವರು ಎಂದು ಹೇಳಿದರು.

ಮದ್ರಾಸ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಡಾ. ತಮಿಳ್ ಸೆಲ್ವಿ ಮಾತನಾಡಿ, ಹಂಪನಾ ಅವರು ಅಪರೂಪದ ವಿದ್ವಾಂಸರು. ಇವರ ಯಾವ ಲೇಖನಗಳೂ ಆಗಿರಲಿ, ಅಡಿಟಿಪ್ಪಣಿ ಇಲ್ಲದೆ ಅಥವಾ ಸೂಕ್ತವಾದ ಮಾಹಿತಿಗಳನ್ನು ಸೇರಿಸದೇ ಇರಲು ಸಾಧ್ಯವೇ ಇಲ್ಲ. ಈಗಿನ ವಿದ್ಯಾಭ್ಯಾಸದಲ್ಲಿ ಕನ್ನಡ ವಿದ್ಯಾರ್ಥಿಗಳಿಗೆ ಇಂಗ್ಲೀಷ್ ನಲ್ಲೂ ಅಷ್ಟೇ ಮಟ್ಟಿನ ಪಾಂಡಿತ್ಯವನ್ನು ಕೊಡಲು ಸಾಧ್ಯವಾಗುತ್ತಿಲ್ಲ. ಕನ್ನಡ ಸಾಹಿತ್ಯವನ್ನು ಇಂಗ್ಲೀಷಿಗೆ ಯಾಕೆ ಹೆಚ್ಚು ಅನುವಾದ ಆಗಿಲ್ಲ ಎಂಬ ಪ್ರಶ್ನೆ ಸಾಮಾನ್ಯವಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕುವೆಂಪು ವಿಶ್ವವಿದ್ಯಾಲಯದ ಕುಲಸಚಿವೆ ಅನುರಾಧ ಜಿ. ಆಗಮಿಸಿದ್ದರು. ವೇದಿಕೆಯಲ್ಲಿ ಕೃತಿಯ ಕತೃ ನಾಡೋಜ ಪ್ರೊ. ಹಂಪನಾ ಉಪಸ್ಥಿತರಿದ್ದರು.

Join Whatsapp