ಬೆಂಗಳೂರು: ಕನ್ನಡದ ಹಿರಿಯ ಪತ್ರಕರ್ತ, ಅದರಲ್ಲೂ ಕನ್ನಡ ಡಿಜಿಟಲ್ ಮಾಧ್ಯಮದ ಹರಿಕಾರ ಎಂದೇ ಪ್ರಸಿದ್ಧರಾಗಿದ್ದ ಎಸ್ ಕೆ ಶ್ಯಾಮ್ ಸುಂದರ್ ಸೋಮವಾರ ರಾತ್ರಿ ನಿಧನರಾದರು.
ಶ್ಯಾಮ್ ಸುಂದರ್ ಕಳೆದ ಕೆಲವು ತಿಂಗಳುಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ರಾತ್ರಿ ಅವರು ಹೃದಯಾಘಾತದಿಂದ ಇಹಲೋಕ ತ್ಯಜಿಸಿದರು. ಶ್ಯಾಮ್ ಸುಂದರ್ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಸಂತಾಪ ಸೂಚಿಸಿದ್ದಾರೆ.
ಹಿರಿಯ ಪತ್ರಕರ್ತ ಎಸ್.ಕೆ. ಶ್ಯಾಮಸುಂದರ್ ಅವರ ನಿಧನದ ಸುದ್ದಿ ದುಃಖವುಂಟುಮಾಡಿದೆ. ಬರಹವನ್ನೇ ಬದುಕಾಗಿಸಿಕೊಂಡಿದ್ದ ಶ್ಯಾಮಸುಂದರ್ ಅವರು ಸುದೀರ್ಘಕಾಲ ಪತ್ರಕರ್ತರಾಗಿ ದುಡಿದವರು. ಮೃತರ ಆತ್ಮಕ್ಕೆ ಚಿರಶಾಂತಿ ದೊರಕಲಿ, ಅವರ ಕುಟುಂಬವರ್ಗಕ್ಕೆ ನೋವು ಭರಿಸುವ ಶಕ್ತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಕರ್ನಾಟಕ ಮುಖ್ಯಮಂತ್ರಿಗಳು ಎಕ್ಸ್ ಸಂದೇಶದಲ್ಲಿ ತಿಳಿಸಿದ್ದಾರೆ.
ಎಸ್.ಕೆ. ಶ್ಯಾಮಸುಂದರ್ ಸುಮಾರು 39 ವರ್ಷಗಳ ಕಾಲ ಕನ್ನಡ ಪತ್ರಕರ್ತರಾಗಿ ಕಾರ್ಯನಿರ್ವಹಿಸಿದ್ದರು. ಈ ಅವಧಿಯಲ್ಲಿ ಅವರು ಕನ್ನಡ ಪತ್ರಿಕೋದ್ಯಮಕ್ಕೆ, ಅದರಲ್ಲೂ ವಿಶೇಷವಾಗಿ ಡಿಜಿಟಲ್ ಪತ್ರಿಕೋದ್ಯಮ ವಲಯಕ್ಕೆ ಗಮನಾರ್ಹ ಕೊಡುಗೆ ನೀಡಿದ್ದಾರೆ.