Home ಟಾಪ್ ಸುದ್ದಿಗಳು ಕಂಗಣಾ ರಣಾವತ್ ಮೋದಿಭಕ್ತಿಯ ಹೇಳಿಕೆಗೆ ಖಾರ ಪ್ರತಿಕ್ರಿಯೆ ನೀಡಿದ ಬಿಜೆಪಿ ಸಂಸದ

ಕಂಗಣಾ ರಣಾವತ್ ಮೋದಿಭಕ್ತಿಯ ಹೇಳಿಕೆಗೆ ಖಾರ ಪ್ರತಿಕ್ರಿಯೆ ನೀಡಿದ ಬಿಜೆಪಿ ಸಂಸದ

ದೆಹಲಿ : ಬಾಲಿವುಡ್‌ ನಟಿ ಕಂಗಣಾ ರಣಾವತ್‌ ‘1947 ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿರಲಿಲ್ಲ, ನಿಜವಾದ ಸ್ವಾತಂತ್ರ್ಯ ಸಿಕ್ಕಿದ್ದು 2014ರಲ್ಲಿ’ ಎಂಬ ಹೇಳಿಕೆಯು ವೈರಲಾಗುತ್ತಿದ್ದು, ಅದಕ್ಕೆ ಬಿಜೆಪಿ ಸಂಸದ ವರುಣ್‌ ಗಾಂಧಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಕಂಗನಾ ಹೇಳಿಕೆಯನ್ನು ‘ಹುಚ್ಚುತನ’ ಅಥವಾ ‘ದೇಶದ್ರೋಹ’ ಎಂದು ಕರೆಯಬೇಕು’ ಎಂದು ವರುಣ್ ಗಾಂಧಿ ಕಿಡಿ ಕಾರಿದ್ದಾರೆ. ಕಂಗನಾ ಹೇಳಿದ್ದನ್ನು ಹಲವಾರು ಸೆಲೆಬ್ರಿಟಿಗಳು ಕಟುವಾಗಿ ಟೀಕಿಸಿದ್ದರಿಂದ ಅವರ ವೀಡಿಯೊ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.


ರಾಷ್ಟ್ರೀಯ ಮಾಧ್ಯಮ ನೆಟ್‌ವರ್ಕ್‌ನ ವಾರ್ಷಿಕ ಶೃಂಗಸಭೆಯಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ಕಂಗಣಾ ರಣಾವತ್‌ ಸ್ವಾತಂತ್ರ್ಯ ಹೋರಾಟದ ಕುರಿತು ಅಸಂಬದ್ಧವಾಗಿ ಮಾತನಾಡಿದ್ದಾರೆ. ದೇಶದ ಸ್ವಾತಂತ್ರ್ಯವನ್ನು “ವೋ ಆಜಾದಿ ನಹೀ ಥಿ, ವೋ ಭೀಕ್ ಥಿ. ಔರ್ ಜೋ ಆಜಾದಿ ಮಿಲಿ ಹೈ ವೋ 2014 ಮೈ ಮಿಲಿ ಹೈ” (ಅದು ಸ್ವಾತಂತ್ರ್ಯವಲ್ಲ, ಭಿಕ್ಷೆಯಾಗಿತ್ತು) ಎಂದಿದ್ದಾರೆ. ಮೋದಿಯವರನ್ನು ಹೊಗಳಲು ಆಕೆ ಆ ರೀತಿ ಹೇಳಿದ್ದಾರೆ. ಜೊತೆಗೆ “2014 ರಲ್ಲಿ ನಮಗೆ ನಿಜವಾದ ಸ್ವಾತಂತ್ರ್ಯ ಸಿಕ್ಕಿತು” ಎಂದು ಕೂಡ ರಣಾವತ್ ಹೇಳಿಕೆ ನೀಡಿದ್ದರು.

ಈ ಕುರಿತು ಟ್ವಿಟರ್‌ ನಲ್ಲಿ ಖಾರವಾಗಿ ಪ್ರತಿಕ್ರಿಯಿಸಿದ ವರುಣ್‌ ಗಾಂಧಿ ” ಮಹಾತ್ಮಾ ಗಾಂಧಿಯವರ ತ್ಯಾಗ ಮತ್ತು ತಪಸ್ಸಿಗೆ ಅವಮಾನ ಮಾಡಲಾಗುತ್ತದೆ. ಮಹಾತ್ಮರ ಹಂತಕನಿಗೆ ಗೌರವ ನೀಡಲಾಗುತ್ತದೆ. ಮಂಗಲ್ ಪಾಂಡೆಯಿಂದ ಪ್ರಾರಂಭಿಸಿ ರಾಣಿ ಲಕ್ಷ್ಮೀಬಾಯಿ, ಭಗತ್ ಸಿಂಗ್, ಚಂದ್ರಶೇಖರ್ ಆಜಾದ್, ನೇತಾಜಿ ಮತ್ತು ಇನ್ನೂ ಹೆಚ್ಚಿನ ಲಕ್ಷಾಂತರ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗಕ್ಕೆ ಹೇಳಿಕೆಯು ಅವಮಾನ ಮಾಡಿದೆ. ನಾನು ಈ ಆಲೋಚನಾ ಪ್ರಕ್ರಿಯೆಯನ್ನು ಹುಚ್ಚುತನ ಅಥವಾ ದೇಶದ್ರೋಹ ಎಂದು ಕರೆಯುತ್ತೇನೆ” ಎಂದು ಕಿಡಿಗಾರಿದ್ದಾರೆ.

ಬಿಜೆಪಿಯವರನ್ನು ಮೆಚ್ಚಿಸಲು ಕಂಗಣಾ ರಣಾವತ್ ಇತ್ತೀಚೆಗೆ ವಿವಾದಾಸ್ಪದ ಮಾತುಗಳನ್ನಾಡುತ್ತಿದ್ದು, ಅಸಮಬದ್ಧತೆಯಿಂದ ಕೂಡಿರುತ್ತದೆ. ಅದೇ ಸಾಲಿಗೆ ಪ್ರಸ್ತುತ ಹೇಳಿಕೆಯು ಸೇರಿದೆ.

Join Whatsapp
Exit mobile version