ನವದೆಹಲಿ: ರೈತರ ಪ್ರತಿಭಟನೆ ಬಳಿಕ ರದ್ದಾಗಿದ್ದ ಮೂರು ಕೃಷಿ ಕಾನೂನುಗಳನ್ನು ಮತ್ತೆ ಜಾರಿ ಮಾಡಬೇಕು ಎಂದು ಹೇಳಿಕೆ ನೀಡಿದ್ದ ನಟಿ, ಬಿಜೆಪಿ ಸಂಸದೆ ಕಂಗನಾ ರಣಾವತ್ ಬಹಿರಂಗ ಕ್ಷಮೆ ಕೇಳಿದ್ದಾರೆ.
ಕಂಗನಾ ಹೇಳಿಕೆಗೆ ಸ್ವಪಕ್ಷದಿಂದಲೇ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಅವರು ವಿಡಿಯೋ ಬಿಡುಗಡೆ ಮಾಡುವ ಮೂಲಕ ಕ್ಷಮೆ ಕೇಳಿದ್ದಾರೆ.
ನಾನು ಬರೀ ನಟಿಯಲ್ಲ. ರಾಜಕಾರಣಿಯೂ ಆಗಿದ್ದೇನೆ ಮತ್ತು ನನ್ನ ಅಭಿಪ್ರಾಯಗಳು ವೈಯಕ್ತಿಕವಾಗಿರಬಾರದು. ಅದು ಪಕ್ಷದ ಪ್ರತಿಬಿಂಬವಾಗಿರಬೇಕು. ರೈತರ ಕಾನೂನುಗಳ ಬಗ್ಗೆ ನನ್ನ ಅಭಿಪ್ರಾಯಗಳು ವೈಯಕ್ತಿಕವಾಗಿವೆ. ನನ್ನ ಹೇಳಿಕೆಗಳು ಪಕ್ಷದ ನಿಲುವನ್ನು ಪ್ರತಿನಿಧಿಸುವುದಿಲ್ಲ. ನನ್ನ ಅಭಿಪ್ರಾಯಗಳು ಮತ್ತು ಮಾತುಗಳಿಂದ ನಾನು ಯಾರನ್ನಾದರೂ ನಿರಾಶೆಗೊಳಿಸಿದ್ದರೆ ಅದಕ್ಕಾಗಿ ನಾನು ಕ್ಷಮೆಯಾಚಿಸುತ್ತೇನೆ. ನಾನು ನನ್ನ ಮಾತನ್ನು ಹಿಂದಕ್ಕೆ ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ದಾರೆ.
ಖಾಸಗಿ ಮಾಧ್ಯಮ ಸಂದರ್ಶನದಲ್ಲಿ ಮಾತನಾಡಿದ ಅವರು, ಮೂರು ಕಾನೂನುಗಳು ರೈತರಿಗೆ ಪ್ರಯೋಜನಕಾರಿ. ಆದರೆ ಕೆಲವು ರಾಜ್ಯಗಳಲ್ಲಿ ರೈತ ಗುಂಪುಗಳ ಪ್ರತಿಭಟನೆಯ ಹಿನ್ನೆಲೆಯಲ್ಲಿ ಕೇಂದ್ರವು ಅದನ್ನು ರದ್ದುಗೊಳಿಸಿದೆ. ಈ ಮೂರು ಕೃಷಿ ಕಾನೂನುಗಳನ್ನು ಹಿಂದಕ್ಕೆ ತರಬೇಕು. ರೈತರೇ ವಾಪಸ್ ತರಲು ಒತ್ತಾಯಿಸಬೇಕು. ರೈತರು ರಾಷ್ಟ್ರದ ಅಭಿವೃದ್ಧಿಯಲ್ಲಿ ಶಕ್ತಿಯ ಆಧಾರ ಸ್ತಂಭವಾಗಿದ್ದಾರೆ. ಅವರ ಒಳಿತಿಗಾಗಿ ಕಾನೂನುಗಳನ್ನು ಹಿಂದಕ್ಕೆ ಪಡೆಯುವಂತೆ ನಾನು ಅವರಿಗೆ ಮನವಿ ಮಾಡಲು ಬಯಸುತ್ತೇನೆ ಎಂದರು.