Home ಟಾಪ್ ಸುದ್ದಿಗಳು ಒಂದು ಕೆನ್ನೆಗೆ ಹೊಡೆದಾಗ ಮತ್ತೊಂದು ಕೆನ್ನೆ ತೋರಿಸಿದರೆ ಸಿಗುವುದು ಸ್ವಾತಂತ್ರ್ಯವಲ್ಲ , ಭಿಕ್ಷೆ : ನಾಲಗೆ...

ಒಂದು ಕೆನ್ನೆಗೆ ಹೊಡೆದಾಗ ಮತ್ತೊಂದು ಕೆನ್ನೆ ತೋರಿಸಿದರೆ ಸಿಗುವುದು ಸ್ವಾತಂತ್ರ್ಯವಲ್ಲ , ಭಿಕ್ಷೆ : ನಾಲಗೆ ಹರಿಯಬಿಟ್ಟ ಕಂಗನಾ

►ಮಹಾತ್ಮಾ ಗಾಂಧೀಜಿಯ ಅಹಿಂಸಾ ಮಾರ್ಗದ ಬಗ್ಗೆ ನಟಿಯ ಕೀಳುಮಟ್ಟದ ಹೇಳಿಕೆ

ಮುಂಬೈ : 1947ರಲ್ಲಿ ನಮಗೆ ಸಿಕ್ಕಿದ್ದು ಸ್ವಾತಂತ್ರ್ಯವಲ್ಲ, ಭಿಕ್ಷೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಬಾಲಿವುಡ್ ನಟಿ ಕಂಗನಾ ರಣಾವತ್‌, ಇದೀಗ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಅಹಿಂಸಾ ಮಾರ್ಗದ ವಿಚಾರವಾಗಿ ಕೀಳು ಮಟ್ಟದ ಹೇಳಿಕೆ ನೀಡಿದ್ದಾರೆ. ಒಂದು ಕೆನ್ನೆಗೆ ಹೊಡೆದಾಗ ಮತ್ತೊಂದು ಕೆನ್ನೆ ತೋರಿಸಿದರೆ ನಮಗೆ ಸಿಗುವುದು ಸ್ವಾತಂತ್ರ್ಯವಲ್ಲ, ಭಿಕ್ಷೆ” ಎಂದು ನಾಲಗೆ ಹರಿಯಬಿಟ್ಟಿದ್ದಾರೆ.

ತನ್ನ ಅಧಿಕೃತ ಇನ್‌ಸ್ಟಾಗ್ರಾಂನಲ್ಲಿ ಕಂಗನಾ 1940ರಲ್ಲಿ ಪ್ರಕಟಗೊಂಡಿದ್ದ ನೇತಾಜಿ ಅವರನ್ನು ಹಸ್ತಾಂತರಿಸಲು ಗಾಂಧಿ ಮತ್ತು ಇತರರ ಸಮ್ಮತಿ ಎಂದು ಶೀರ್ಷಿಕೆಯಿರುವ ಲೇಖನವನ್ನು ಹಂಚಿಕೊಂಡಿದ್ದಾರೆ. ನೀವು ಗಾಂಧಿ ಮತ್ತು ನೇತಾಜಿಯನ್ನು ಒಟ್ಟಿಗೆ ಅಭಿಮಾನಿಸಲು ಸಾಧ್ಯವಿಲ್ಲ ಎಂದು ಬರೆದಿದ್ದು, ಜನರೇ ನಿರ್ಧರಿಸಿ ಆಯ್ಕೆ ಮಾಡಿಕೊಳ್ಳಿ. ವಿರೋಧಿಗಳನ್ನು ಎದುರಿಸಲಾಗದೆ, ಹೋರಾಡಲು ಬಿಸಿರಕ್ತವಿಲ್ಲದ, ಆದರೆ ಅಧಿಕಾರ ದಾಹಿಗಳಾಗಿದ್ದ ಕುತಂತ್ರಿಗಳು ಸ್ವಾತಂತ್ರ್ಯಕ್ಕಾಗಿ ಹೋರಾಡಿದವರನ್ನು ತಮ್ಮ ಯಜಮಾನರಿಗೆ ಹಸ್ತಾಂತರಿಸಿದರು. ನಾವು ಗಾಂಧಿಯ ಮಾರ್ಗ ಅನುಸರಿಸಿಕೊಂಡು ಒಂದು ಕೆನ್ನೆಗೆ ಹೊಡೆದರೆ ಮತ್ತೊಂದು ಕೆನ್ನೆ ತೋರಿಸಿದಾಗ ನಮಗೆ ಸಿಗುವುದು ಸ್ವಾತಂತ್ರ್ಯವಲ್ಲ, ಭಿಕ್ಷೆ ಎಂದು ಕಂಗನಾ ಬರೆದಿದ್ದಾರೆ.

ಭಗತ್‌ ಸಿಂಗ್‌ ಅಥವಾ ಸುಭಾಷ್‌ ಚಂದ್ರ ಬೋಸ್‌ ಅವರಿಗೆ ಮಹಾತ್ಮ ಗಾಂಧಿಯವರು ಬೆಂಬಲ ನೀಡಲಿಲ್ಲ. ಬುದ್ಧಿವಂತಿಕೆಯಿಂದ ನಿಮ್ಮ ನಾಯಕರನ್ನು ನೀವೇ ಆರಿಸಿಕೊಳ್ಳಿ. ಜನರು ತಮ್ಮ ಇತಿಹಾಸ ಮತ್ತು ಅವರ ನಾಯಕರನ್ನು ಅರಿತುಕೊಳ್ಳುವ ಸಮಯ ಕೂಡಿ ಬಂದಿದೆ ಎಂದು ಹೇಳಿದ್ದಾರೆ. ಅಲ್ಲದೇ ಈ ಹಿಂದೆ ಭಾರತಕ್ಕೆ 1947ರಲ್ಲಿ ಸಿಕ್ಕಿದ್ದು ಭಿಕ್ಷೆ, 2014ರಲ್ಲಿ ಸಿಕ್ಕಿದ್ದು ನಿಜವಾದ ಸ್ವಾತಂತ್ರ್ಯ ಎಂದು ಕಾರ್ಯಕ್ರಮವೊಂದರಲ್ಲಿ ಹೇಳುವ ಮೂಲಕ ನಟಿ ಕಂಗನಾ ವ್ಯಾಪಕ ಟೀಕೆಗೆ ಗುರಿಯಾಗಿದ್ದರು. ಅವರಿಗೆ ನೀಡಿರುವ ಪದ್ಮಶ್ರೀ ಪ್ರಶಸ್ತಿಯನ್ನು ಹಿಂಪಡೆಯಬೇಕು ಎಂಬ ಒತ್ತಾಯವೂ ಕೇಳಿ ಬಂದಿತ್ತು.

Join Whatsapp
Exit mobile version