Home ಕ್ರೀಡೆ ನ್ಯೂಜಿಲೆಂಡ್‌ ಟೆಸ್ಟ್ ನಾಯಕತ್ವ ಸ್ಥಾನ ತೊರೆದ ಕೇನ್‌ ವಿಲಿಯಮ್ಸನ್, ಟಿಮ್ ಸೌಥಿ ನೂತನ ಸಾರಥಿ

ನ್ಯೂಜಿಲೆಂಡ್‌ ಟೆಸ್ಟ್ ನಾಯಕತ್ವ ಸ್ಥಾನ ತೊರೆದ ಕೇನ್‌ ವಿಲಿಯಮ್ಸನ್, ಟಿಮ್ ಸೌಥಿ ನೂತನ ಸಾರಥಿ

‌ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್‌’ಶಿಪ್‌’ನಲ್ಲಿ ನ್ಯೂಜಿಲೆಂಡ್‌ ತಂಡದ ಗೆಲುವಿನ ಸಾರಥ್ಯ ವಹಿಸಿದ್ದ ಕೇನ್ ವಿಲಿಯಮ್ಸನ್, ಕಿವೀಸ್‌ ಟೆಸ್ಟ್‌ ತಂಡದ ನಾಯಕ ಸ್ಥಾನದಿಂದ ಕೆಳಗಿಳಿದಿದ್ದಾರೆ. ವಿಲಿಯಮ್ಸನ್‌ ಸ್ಥಾನಕ್ಕೆ ಟಿಮ್ ಸೌಥಿ ಅವರನ್ನು ನೇಮಿಸಲಾಗಿದೆ ಎಂದು ನ್ಯೂಜಿಲೆಂಡ್‌ ಕ್ರಿಕೆಟ್ ಮಂಡಳಿ (ಎನ್‌’ಝಡ್‌ಸಿ) ತಿಳಿಸಿದೆ.

2016ರಲ್ಲಿ ಟೆಸ್ಟ್‌ ತಂಡದ ನಾಯಕನಾಗಿ ನೇಮಕವಾದ ಬಳಿಕ 40 ಟೆಸ್ಟ್‌’ಗಳಲ್ಲಿ ನ್ಯೂಜಿಲೆಂಡ್‌ ತಂಡವನ್ನು ಮುನ್ನಡೆಸಿರುವ ವಿಲಿಯಮ್ಸನ್,  22 ಗೆಲುವು, 10 ಸೋಲು ಹಾಗೂ ಎಂಟು ಡ್ರಾ ಫಲಿತಾಂಶ ಕಂಡಿದ್ದಾರೆ. ಸೌಥಾಂಪ್ಟನ್‌’ನಲ್ಲಿ ಕಳೆದ ವರ್ಷ ಜೂನ್‌ನಲ್ಲಿ ನಡೆದಿದ್ದ ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್‌’ಶಿಪ್ ಫೈನಲ್‌’ನಲ್ಲಿ ಭಾರತದ ವಿರುದ್ಧ 8 ವಿಕೆಟ್‌ ಅಂತರದಲ್ಲಿ ಗೆಲುವು ಸಾಧಿಸಿದ್ದ ಕಿವೀಸ್‌ ಚಾಂಪಿಯನ್‌ ಆಗಿ ಮೆರೆದಿತ್ತು.

“ನ್ಯೂಜಿಲೆಂಡ್ ಟೆಸ್ಟ್ ತಂಡದ ನಾಯಕತ್ವ ನಿರ್ವಹಿಸಿದ್ದು, ಅತ್ಯಂತ ಗೌರವದ ಸಂಗತಿಯಾಗಿದೆ. ನನಗೆ ಟೆಸ್ಟ್ ಕ್ರಿಕೆಟ್ ಎಂಬುದು ಅತ್ಯುನ್ನತ ಕ್ರಿಕೆಟ್ ಮಾದರಿಯಾಗಿದೆ. ಈ ಮಾದರಿಯಲ್ಲಿ ತಂಡವನ್ನು ಮುನ್ನಡೆಸುವಾಗ ಎದುರಾದ ಸವಾಲುಗಳನ್ನು ನಾನು ಆನಂದಿಸಿದ್ದೇನೆ’. ವೃತ್ತಿಜೀವನದ ಈ ಹಂತದಲ್ಲಿ ಈ ನಿರ್ಧಾರ ತೆಗೆದುಕೊಳ್ಳಲು ಸರಿಯಾದ ಸಮಯ ಎಂದು ನಾನು ಭಾವಿಸುತ್ತೇನೆ” ಎಂದು ಲಿಯಮ್ಸನ್ ಹೇಳಿದ್ದಾರೆ.

ಏಕದಿನ ಮಾದರಿಯಲ್ಲಿ ನಾಯಕನಾಗಿ ಮತ್ತು ಮೂರೂ ಮಾದರಿಗಳಲ್ಲಿ ನ್ಯೂಜಿಲೆಂಡ್‌ ಪರವಾಗಿ ಆಡುವುದನ್ನು ವಿಲಿಯಮ್ಸನ್ ಮುಂದುವರಿಸಲಿದ್ದಾರೆ.

2017-21ರ ನಡುವೆ 22 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ನಾಯಕನಾಗಿ ತಂಡವನ್ನು ಮುನ್ನಡೆಸಿರುವ ಅನುಭವ ಹೊಂದಿರುವ ಹಿರಿಯ ಬೌಲರ್‌ ಸೌಥಿ, ಇದೀಗ ಟೆಸ್ಟ್ ತಂಡವನ್ನು ಮುನ್ನಡೆಸಲಿದ್ದಾರೆ. ಈ ತಿಂಗಳಾಂತ್ಯದಲ್ಲಿ ನಡೆಯುವ  – ಪಾಕಿಸ್ತಾನದ ವಿರುದ್ಧದ ಎರಡು ಪಂದ್ಯಗಳ ಕಿರು ಟೆಸ್ಟ್‌ ಸರಣಿಯಲ್ಲಿ ಸೌಥಿ ನಾಯಕನಾಗಿ ಕಣಕ್ಕಿಳಿಯಲಿದ್ದಾರೆ.

” ಟೆಸ್ಟ್ ನಾಯಕನಾಗಿ ನೇಮಕಗೊಂಡಿರುವುದು ಒಂದು ದೊಡ್ಡ ಗೌರವ. ಟೆಸ್ಟ್ ಕ್ರಿಕೆಟ್ ಅನ್ನು ಪ್ರೀತಿಸುತ್ತೇನೆ, ಈ ಸ್ವರೂಪದಲ್ಲಿ ತಂಡವನ್ನು ಮುನ್ನಡೆಸುವ ಅವಕಾಶದಿಂದ ನಾನು ನಿಜವಾಗಿಯೂ ಉತ್ಸುಕನಾಗಿದ್ದೇನೆ.”  ಎಂದು ಸೌಥಿ ಪ್ರತಿಕ್ರಿಯಿಸಿದ್ದಾರೆ.

ಪಾಕಿಸ್ತಾನದ ಪ್ರವಾಸ ಕೈಗೊಳ್ಳಲಿರುವ  ನ್ಯೂಜಿಲೆಂಡ್‌ ತಂಡವನ್ನು ಪ್ರಕಟಿಸಲಾಗಿದ್ದು, ಸ್ಪಿನ್ನರ್ ಇಶ್ ಸೋಧಿ, ನಾಲ್ಕು ವರ್ಷಗಳ ಬಳಿಕ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ವೇಗದ ಬೌಲರ್‌ ಟ್ರೆಂಟ್ ಬೌಲ್ಟ್ ಮತ್ತು ಗಾಯದ ಕಾರಣ ಕೈಲ್ ಜೇಮಿಸನ್ ಪಾಕ್‌ ಸರಣಿಯಿಂದ ಹೊರಗುಳಿದಿದ್ದಾರೆ.

Join Whatsapp
Exit mobile version