ವಿಧಾನಸಭೆ ವಿಸರ್ಜಿಸುವಂತೆ ಉದ್ಧವ್ ಠಾಕ್ರೆಗೆ ಸಲಹೆ ನೀಡಿದ ಕಮಲ್ ನಾಥ್, ಸಂಜಯ್ ರಾವತ್

Prasthutha|

►► ಮಹಾರಾಷ್ಟ್ರದ ಬಿಕ್ಕಟ್ಟಿನ ಮಧ್ಯೆ ಮುಖ್ಯಮಂತ್ರಿಗೆ ಕೋವಿಡ್ ಪಾಸಿಟಿವ್

- Advertisement -

ಮುಂಬೈ: ರಾಜಕೀಯ ಬಿಕ್ಕಟ್ಟು ಉದ್ಭವಿಸಿರುವ ಹಿನ್ನೆಲೆಯಲ್ಲಿ ವಿಧಾನ ಸಭೆಯನ್ನು ವಿಸರ್ಜಿಸುವಂತೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆಯವರಿಗೆ ಶಿವಸೇನೆ ಮುಖಂಡ ಸಂಜಯ ರಾವತ್, ಮಧ್ಯಪ್ರದೇಶದ ಕಾಂಗ್ರೆಸ್ ನಾಯಕ ಕಮಲನಾಥ್ ಮತ್ತಿತರರು ಸಲಹೆ ನೀಡಿದ್ದಾರೆ.


ಸೋಮವಾರ ಮಧ್ಯರಾತ್ರಿಯಲ್ಲಿ ಮುಂಬಯಿಯಿಂದ ಸೂರತ್ ಗೆ ಹಾರಿದ್ದ ನಗರಾಭಿವೃದ್ಧಿ ಸಚಿವರಾಗಿದ್ದ ಏಕನಾಥ ಶಿಂಧೆ ಮತ್ತು ಅವರ ಬೆಂಬಲಿಗ ಶಾಸಕರ ತಂಡವು ಮಂಗಳವಾರ ಮಧ್ಯರಾತ್ರಿಯ ಬಳಿಕ ಖಾಸಗಿ ವಿಮಾನದಲ್ಲಿ ಇನ್ನೊಂದು ಬಿಜೆಪಿ ಆಳ್ವಿಕೆಯ ರಾಜ್ಯ ಅಸ್ಸಾಂ ರಾಜಧಾನಿ ಗುವಾಹಟಿಗೆ ತೆರಳಿ ಬೀಡು ಬಿಟ್ಟಿದೆ. ಇಂದು ಬೆಳಿಗ್ಗೆ ಗುವಾಹಟಿಯಿಂದ ಮಾತನಾಡಿದ ಶಿಂಧೆ, ನಮ್ಮ ಜೊತೆ 40 ಶಾಸಕರಿರುವುದಾಗಿ ಹೇಳಿದ್ದಾರೆ. ಅಷ್ಟು ಶಾಸಕರಿದ್ದರೆ ಊರಿಗೆ ಬಾರದೆ ಅಡಗಲು ಗುವಾಹಟಿಗೆ ಹೋದದ್ದೇಕೆ ಎಂದು ಶಿವಸೇನೆಯವರು ಕುಟುಕಿದ್ದಾರೆ.

- Advertisement -


ಈ ನಡುವೆ ಶಿಂಧೆ ವಿರುದ್ಧ ಶಿವಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು ಕೆಲವು ಮಹಿಳಾ ಕಾರ್ಯಕರ್ತರು ಕಣ್ಣೀರು ಸುರಿಸಿದ್ದೂ ವರದಿಯಾಗಿದೆ. ಇದರ ನಡುವೆ ನಾನು ಶಿವಸೇನೆ ಬಿಟ್ಟಿಲ್ಲ ಎಂದು ಶಿಂಧೆ ಗುವಾಹಟಿಯಲ್ಲಿ ಹೇಳಿದ್ದಾರೆ. ಶಿವಸೇನೆ ನಾಯಕರು ನಿನ್ನೆಯೇ ಶಿಂಧೆಯವರ ನಂಬರ್ ಟೂ ಶಾಸಕಾಂಗ ಪಕ್ಷದ ನಾಯಕನ ಸ್ಥಾನಕ್ಕೆ ಅಜಯ್ ಚೌಧರಿಯವರನ್ನು ತಂದು ಕೂರಿಸಿದ್ದಾರೆ.
ಇದರ ನಡುವೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆಯವರು ಕೋವಿಡ್ ಪಾಸಿಟಿವ್ ಬಂದಿದೆ ಎಂದು ಹೇಳಿ ಆಸ್ಪತ್ರೆಗೆ ದಾಖಲಾಗಿದ್ದು, ಇದು ಶಿವಸೇನೆಯ ನೋವನ್ನು ಬಿಗಡಾಯಿಸಿದೆ. ಸಂಸದ ಸಂಜಯ್ ರಾವುತ್ ಮರಾಠಿಯಲ್ಲಿ ಟ್ವೀಟ್ ಮಾಡಿ ಈಗಿನ ಸಮಸ್ಯೆಗೆ ವಿಧಾನ ಸಭೆ ವಿಸರ್ಜನೆಯೊಂದೇ ಪರಿಹಾರ ಎಂದು ಹೇಳಿದ್ದಾರೆ.


ಒಂದು ವೇಳೆ ಶಿಂಧೆ ಹೇಳಿದಂತೆ 40 ಜನ ಶಾಸಕರು ಆ ಕಡೆಗೆ ಹೋದಲ್ಲಿ ಎಂವಿಎ ಸರಕಾರ ಪತನವಾಗುವ ಸಂಭವ ಹೆಚ್ಚು. ನಾನು ಬಾಳಾ ಠಾಕ್ರೆಯವರ ನಿಜವಾದ ಹಿಂದುತ್ವವನ್ನು ತರಲು ಹೊರಟಿದ್ದೇನೆ ಎಂದು ಬಂಡಾಯಗಾರ ಶಿಂಧೆ ಹೇಳಿದ್ದಾರೆ. ಮುಂಬಯಿಯಲ್ಲಿ ಶಿವಸೇನೆ ತನ್ನ 12 ಶಾಸಕರನ್ನು ಮುಂಬಯಿ ಲೋವರ್ ಪರಳದ ರೇಗಿಸ್ ಹೋಟೆಲಿನಲ್ಲಿ ನಿಲ್ಲಿಸಿರುವುದಾಗಿ ವರದಿಯಾಗಿದೆ.


ಮಂಗಳವಾರ ಮುಖ್ಯಮಂತ್ರಿಗಳ ಪಿಎ ಮಿಲಿಂದ್ ನಾರ್ವೆಕರ್ ಮತ್ತು ಎಂಎಲ್ ಸಿ ರವೀಂದ್ರ ಪಾಠಕ್ ಸೂರತ್ ಗೆ ತೆರಳಿ ತಮ್ಮ ಶಾಸಕರನ್ನು ಮಾತನಾಡಿಸಿದ್ದಾರೆ. ಕೂಡಲೆ ಶಿಂಧೆ ಮತ್ತು ಬಿಜೆಪಿ ಶಾಸಕರು ಸ್ಥಳ ಬದಲಿಸಿ ಗುವಾಹಟಿಗೆ ಹಾರಿದ್ದಾರೆ. ಬಿಜೆಪಿ ಶಾಸಕ ಸಂಜಯ್ ಕುಟೆ ಸಹ ಸೂರತ್ ಗೆ ಹೋಗಿ ಶಿಂಧೆ ಜೊತೆ ಮಾತುಕತೆ ನಡೆಸಿದ್ದರು.

ಬುಧವಾರ ಒಂದು ಗಂಟೆಗೆ ಎಂವಿಎ ಸಂಪುಟ ಸಭೆ ನಡೆದಿದೆ. ಮುಖ್ಯಮಂತ್ರಿ ದೂರದಲ್ಲಿ ತೆರೆಯಲ್ಲಿ ಮಾತ್ರ ಕಾಣಿಸಿಕೊಂಡರು ಎನ್ನಲಾಗಿದೆ. ಸಂಜಯ್ ರಾವುತ್ ಮತ್ತೆ ಚುನಾವಣೆಗೆ ಹೋಗುವುದೇ ಸರಿ ಎಂದು ಪ್ರಬಲವಾಗಿ ಪ್ರತಿಪಾದಿಸಿದ್ದಾರೆ ಎನ್ನಲಾಗಿದೆ.



Join Whatsapp