Home ಟಾಪ್ ಸುದ್ದಿಗಳು ಜನಸಂಖ್ಯೆ ಹೆಚ್ಚಿಸಲು ಹಿಂದೂಗಳಿಗೆ ಕರೆ ಕೊಟ್ಟ ಕಲ್ಲಡ್ಕ ಪ್ರಭಾಕರ್ ಭಟ್ ಗೆ ಮಕ್ಕಳೆಷ್ಟೆಂದು ನಿಮಗೆ ತಿಳಿದಿದೆಯೇ?

ಜನಸಂಖ್ಯೆ ಹೆಚ್ಚಿಸಲು ಹಿಂದೂಗಳಿಗೆ ಕರೆ ಕೊಟ್ಟ ಕಲ್ಲಡ್ಕ ಪ್ರಭಾಕರ್ ಭಟ್ ಗೆ ಮಕ್ಕಳೆಷ್ಟೆಂದು ನಿಮಗೆ ತಿಳಿದಿದೆಯೇ?

ಬೆಂಗಳೂರು: ಅಲ್ಪಸಂಖ್ಯಾತ ಬಾಹುಳ್ಯವಿರುವ ಮಂಗಳೂರಿನ ಉಳ್ಳಾಲವನ್ನು ಪಾಕಿಸ್ತಾನ ಎಂದು ಕರೆಯುವ ಮೂಲಕ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರೆಸ್ಸೆಸ್)ದ ನಾಯಕ ಕಲ್ಲಡ್ಕ ಪ್ರಭಾಕರ್ ಭಟ್ ಮತ್ತೊಂದು ವಿವಾದದ ಕಿಡಿಯನ್ನು ಹಚ್ಚಿದ್ದಾರೆ. ಮುಸ್ಲಿಮರ ಜನಸಂಖ್ಯೆಯ ಕುರಿತು ಉಲ್ಲೇಖಿಸುತ್ತಾ ತಮ್ಮ ಮಂದಿರ ಮತ್ತು ಸಂಸ್ಕೃತಿಯನ್ನು ರಕ್ಷಿಸುವುದಕ್ಕಾಗಿ ಹಿಂದೂಗಳು ತಮ್ಮ ಜನಸಂಖ್ಯೆಯನ್ನು ಹೆಚ್ಚಿಸಬೇಕೆಂದು ಕರೆ ನೀಡಿದ್ದಾರೆ.

ಕಾಂಗ್ರೆಸ್ ನಾಯಕ ಕಲ್ಲಡ್ಕ ಇಸ್ಮಾಯೀಲ್ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಪ್ರಭಾಕರ್ ಭಟ್ ಈ ಹಿಂದೆಯೂ ಹಲವು ಕೋಮುಪ್ರಚೋದನಕಾರಿ ಭಾಷಣಗಳನ್ನು ಮಾಡಿದ್ದರು. ಈ ಹಿಂದೆ ಅವರು ‘ಮುಸ್ಲಿಮ್ ಮಹಿಳೆಯರ ಬುರ್ಖಾ ಎತ್ತಿ ನೋಡಿ’ ಎಂಬ ಹೇಳಿಕೆಯನ್ನು ನೀಡಿರುವುದು ಕೋಮು ಪ್ರಚೋದನೆಗೆ ಕಾರಣವಾಗಿತ್ತು. ಇದೀಗ ಸಂಸ್ಕೃತಿಯನ್ನು ರಕ್ಷಿಸುವುದಕ್ಕಾಗಿ ಹಿಂದೂಗಳ ಜನಸಂಖ್ಯೆಯನ್ನು ಹೆಚ್ಚಿಸಬೇಕೆಂದು ಕರೆನೀಡುವ ಮೂಲಕ ಮತ್ತೆ ಕೋಮು ಆಧಾರಿತ ವಿಂಗಡನೆಗೆ ಪ್ರಯತ್ನಿಸಿದ್ದಾರೆ.

ಆದರೆ ಇಂತಹ ಹೇಳಿಕೆಯನ್ನು ನೀಡಿರುವ ಪ್ರಭಾಕರ್ ಭಟ್ ಗೆ ಇರುವುದು ಒಬ್ಬಳು ಪುತ್ರಿ ಮಾತ್ರ ಎಂಬುದು ವಾಸ್ತವವಾಗಿದೆ.

ಕಿನ್ಯದಲ್ಲಿ ಇಂದು ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಭಟ್, “ಹಿಂದೂಗಳ ಸಂಖ್ಯೆ ಕಡಿಮೆಯಾಗಿ ಮುಸ್ಲಿಮ್ ಜನಸಂಖ್ಯೆಯು ಹೆಚ್ಚಳಗೊಂಡ ಕಾರಣ ಪಾಕಿಸ್ತಾನ ಮತ್ತು ಬಾಂಗ್ಲದೇಶ ಅಸ್ತಿತ್ವಕ್ಕೆ ಬಂದಿದೆ” ಎಂದು ಹೇಳಿದರು.

“ಮನೆಯಲ್ಲಿ ಒಂದೇ ಮಗುವಿದ್ದಾಗ ಅಲ್ಲಿ ಒಡಹುಟ್ಟಿದವರಿರುವುದಿಲ್ಲ ಮತ್ತು ಸ್ವಾರ್ಥವಾಗಿರುತ್ತಾರೆ. ಮನೆಯಲ್ಲಿ ಹೆಚ್ಚು ಮಕ್ಕಳಿದ್ದಾಗ ಅಲ್ಲಿ ಸಂತೋಷ ಮತ್ತು ಉತ್ಸಾಹವಿರುತ್ತದೆ. ಒಟ್ಟಿನಲ್ಲಿ ಹಿಂದೂಗಳ ಜನಸಂಖ್ಯೆ ಕಡಿಮೆಯಿದೆಯೆಂದು ನಾನು ಭಾವಿಸುತ್ತೇನೆ. ಕಿನ್ಯದಲ್ಲಿ (ಮಂಗಳೂರಿನ ಒಂದು ಗ್ರಾಮ) ನೀವು ಅದನ್ನು ಕಾಣುತ್ತೀರಿ. ಇನ್ನು ಉಳ್ಳಾಲದ ಕುರಿತು ಮಾತನಾಡಬೇಕೆಂದೇ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ನಮ್ಮ ಮಂದಿರ, ಆಚರಣೆ ಮತ್ತು ಸಂಸ್ಕೃತಿಯನ್ನು ರಕ್ಷಿಸುವವರು ಯಾರು?” ಎಂದು ಪ್ರಶ್ನಿಸುತ್ತಾ ನೆರೆದವರನ್ನು ಪ್ರಚೋದಿಸಿದರು.

“ನೀವು ಉಳ್ಳಾಲ ಪೇಟೆಗೆ ಹೋದರೆ ಅದು ಪಾಕಿಸ್ತಾನವಾಗಿರುವುದು ಕಾಣಬಹುದು. ಹಲವು ಕಡೆ ಈ ರೀತಿ ಆಗಿದೆ” ಎಂದು ಭಟ್ ಕಾರ್ಯಕ್ರಮದಲ್ಲಿ ಹೇಳಿದರು.

Join Whatsapp
Exit mobile version