Home ಟಾಪ್ ಸುದ್ದಿಗಳು ಕಲ್ಲಡ್ಕ ಭಟ್ ಗೆ ಜಾಮೀನು: ವಿವಾದಿತ RSS ನಾಯಕನ ಪರ ವಾದಿಸಿದ್ದು ಕಾಂಗ್ರೆಸ್ ವಕೀಲ !

ಕಲ್ಲಡ್ಕ ಭಟ್ ಗೆ ಜಾಮೀನು: ವಿವಾದಿತ RSS ನಾಯಕನ ಪರ ವಾದಿಸಿದ್ದು ಕಾಂಗ್ರೆಸ್ ವಕೀಲ !

ಮಂಡ್ಯ: ಮುಸ್ಲಿಮ್ ಮಹಿಳೆಯರ ಅವಹೇಳನ ಪ್ರಕರಣದಲ್ಲಿ ವಿವಾದಿತ ಆರ್ ಎಸ್ ಎಸ್ ನಾಯಕ ಡಾ. ಕಲ್ಲಡ್ಕ ಪ್ರಭಾಕರ್ ಭಟ್ ಅವರಿಗೆ ಶ್ರೀರಂಗಪಟ್ಟಣದ ಮೂರನೇ ಅಪರ ಜಿಲ್ಲಾ ಮತ್ತು ಸೆಷನ್ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

ಈ ಪ್ರಕರಣದಲ್ಲಿ ವಿವಾದಿತ ಹಿಂದುತ್ವದ ನಾಯಕನ ಪರವಾಗಿ ವಾದ ಮಂಡಿಸಿರುವ ವಕೀಲ ಕಾಂಗ್ರೆಸ್ ಪಕ್ಷದ ಲೀಗಲ್ ಸೆಲ್’ನ ಮುಖ್ಯಸ್ಥ ಎಂದು ತಿಳಿದುಬಂದಿದೆ.

ದೂರುದಾರೆ ನಜ್ಮಾ ನಜೀರ್ ಅವರ ಪರ ವಕಾಲತ್ತು ಹಾಕಿದ್ದ ಹಿರಿಯ ನ್ಯಾಯವಾದಿ ಎಸ್. ಬಾಲನ್ ಅವರು ಕಲ್ಲಡ್ಕ ಪ್ರಭಾಕರ್ ಭಟ್ ಅವರಿಗೆ ಜಾಮೀನು ನೀಡಬಾರದು ಎಂದು ಶ್ರೀರಂಗಪಟ್ಟಣ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು. ಆರೋಪಿ ಕಲ್ಲಡ್ಕ ಭಟ್ ಪರವಾಗಿ ವಕೀಲ ಡಿ. ಚಂದ್ರೇಗೌಡ ಅವರು ವಾದ ಮಂಡಿಸಿದ್ದರು. ವಕೀಲ ಚಂದ್ರೇಗೌಡ ಅವರು ಶ್ರೀರಂಗಪಟ್ಟಣ ತಾಲೂಕು ಕಾಂಗ್ರೆಸ್ ಪಕ್ಷದ ಕಾನೂನು ವಿಭಾಗದ ಮುಖ್ಯಸ್ಥ ಎಂದು ತಿಳಿದುಬಂದಿದೆ.

ಶ್ರೀರಂಗಪಟ್ಟಣದ ಪ್ರಕರಣಕ್ಕೆ ಸಂಬಂಧಿಸಿ ಕಾಂಗ್ರೆಸ್ ಪಕ್ಷ ಕಲ್ಲಡ್ಕ ಭಟ್ ಅವರ ವಿರುದ್ಧ ನಿಲುವು ತೆಗೆದುಕೊಂಡಿತ್ತು. ಕಾಂಗ್ರೆಸ್ ಪಕ್ಷದ ಅಧಿಕೃತ ವಕ್ತಾರರು ಸುದ್ದಿಗೋಷ್ಠಿ ನಡೆಸಿ ಕಲ್ಲಡ್ಕ ಭಟ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಆದರೆ ಹೈಕೋರ್ಟ್’ನಲ್ಲಿ ಕಲ್ಲಡ್ಕ ಭಟ್ ಅವರ ಜಾಮೀನು ಅರ್ಜಿಯ ವಿಚಾರಣೆಯ ವೇಳೆ ಸರ್ಕಾರದ ಪರ ವಕೀಲರು `ಕಲ್ಲಡ್ ಭಟ್ ಅವರನ್ನು ಬಂಧಿಸಲ್ಲ’ ಎಂದು ಮೌಖಿಕವಾಗಿ ತಿಳಿಸಿದ್ದರು. ಅಲ್ಲದೇ ಶ್ರೀರಂಗಪಟ್ಟಣ ನ್ಯಾಯಾಲಯದಲ್ಲಿ ಕಲ್ಲಡ್ಕ ಪ್ರಭಾಕರ್ ಭಟ್ ಪರವಾಗಿ ಕಾಂಗ್ರೆಸ್ ಪಕ್ಷದ ಕಾನೂನು ವಿಭಾಗದಲ್ಲಿ ಜವಾಬ್ದಾರಿ ಹೊಂದಿರುವ ವಕೀಲರು ವಾದ ಮಂಡಿಸಿದ್ದಾರೆ. ಇದು ಕಾಂಗ್ರೆಸ್ ಪಕ್ಷದ ದ್ವಂದ್ವ ನಿಲುವು ಎಂಬ ಮಾತುಗಳು ಕೇಳಿಬರುತ್ತಿದೆ.

Join Whatsapp
Exit mobile version