Home ಟಾಪ್ ಸುದ್ದಿಗಳು ಕಲ್ಲಡ್ಕ ಭಟ್ ನಿರೀಕ್ಷಣಾ ಜಾಮೀನು ಅರ್ಜಿ: ಜನವರಿ 17 ಕ್ಕೆ ಆದೇಶ ಕಾಯ್ದಿರಿಸಿದ ಕೋರ್ಟ್

ಕಲ್ಲಡ್ಕ ಭಟ್ ನಿರೀಕ್ಷಣಾ ಜಾಮೀನು ಅರ್ಜಿ: ಜನವರಿ 17 ಕ್ಕೆ ಆದೇಶ ಕಾಯ್ದಿರಿಸಿದ ಕೋರ್ಟ್

ಮಂಡ್ಯ: ಮುಸ್ಲಿಂ ಮಹಿಳೆಯರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವ ಪ್ರಕರಣದಲ್ಲಿ ಆರ್ ಎಸ್ ಎಸ್ ಹಿರಿಯ ಡಾ. ಕಲ್ಲಡ್ಕ ಪ್ರಭಾಕರ್ ಭಟ್ ಅವರ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ಇಂದು ಶ್ರೀರಂಗಪಟ್ಟಣ 3ನೇ ಅಪರ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಲಯದಲ್ಲಿ ನಡೆಯಿತು. ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ಮುಕ್ತಾಯಗೊಂಡಿದ್ದು, ಜನವರಿ 17ಕ್ಕೆ ಆದೇಶ ಕಾಯ್ದಿರಿಸಲಾಗಿದೆ.


ದೂರುದಾರೆ ನಜ್ಮಾ ನಝೀರ್ ಚಿಕ್ಕನೇರಳೆ ಪರ ಹಿರಿಯ ವಕೀಲ ಎಸ್ ಬಾಲನ್ ವಾದ ಮಂಡಿಸಿದರು. ಆರೋಪಿ ಕಲ್ಲಡ್ಕ ಪ್ರಭಾಕರ ಭಟ್ ದೇಶ ಒಡೆಯುವ ಕೃತ್ಯ ನಡೆಸಿದ್ದು ಅವರ ವಿರುದ್ಧ ಯುಎಪಿಎ ಮತ್ತು ಕೋಕಾ ಕಾಯ್ದೆ ಸೇರಿಸಬೇಕು. ಆರೋಪಿಯ ಹೇಳಿಕೆಯನ್ನು ದೃಢಪಡಿಸಿಕೊಂಡು, ಹೇಳಿಕೆಯ ಮಾದರಿಯನ್ನು ಫಾರೆನ್ಸಿಕ್ ಲ್ಯಾಬ್ ಗೆ ಕಳುಹಿಸಬೇಕು, ಆರೋಪಿ ಮೇಲೆ ರೌಡಿಶೀಟರ್ ತೆರೆಯಲು ಆಧಾರಗಳಿದ್ದು, ಆರೋಪಿಯನ್ನು ಹೆಚ್ಚಿನ ತನಿಖೆಗೆ ಒಳಪಡಿಸಬೇಕಿದೆ. ಹೀಗಾಗಿ ಆರೋಪಿಗೆ ಜಾಮೀನು ಮಂಜೂರು ಮಾಡದೆ ಪೊಲೀಸ್ ಕಸ್ಟಡಿಗೆ ನೀಡಬೇಕು’ ಎಂದು ವಕೀಲ ಬಾಲನ್ ವಾದಿಸಿದರು. ಸುಪ್ರಿಂ ಕೋರ್ಟ್ ಆದೇಶದ ಪ್ರಕಾರ ಆರೋಪಿ ಕಲ್ಲಡ್ಕ ಪ್ರಭಾಕರ್ ಭಟ್ ನಿರೀಕ್ಷಣಾ ಜಾಮೀನಿಗೆ ಅನರ್ಹನಾಗಿದ್ದು, ದೇಶದ ಭದ್ರತೆ, ಸೌಹಾರ್ದತೆಗೂ ಆರೋಪಿ ಕಂಟಕವಾಗಿದ್ದಾರೆ. ಹಿಂದಿನ ಐಪಿಸಿ ಮತ್ತು ಈಗಿನ ನ್ಯಾಯ ಸಂಹಿತೆ ಪ್ರಕಾರ ಕಲ್ಲಡ್ಕ ಪ್ರಭಾಕರ ಭಟ್ ನಿರೀಕ್ಷಣಾ ಜಾಮೀನಿಗೆ ಅರ್ಹರಲ್ಲ, ಎಂದು ವಕೀಲ ಬಾಲನ್ ವಾದ ಮಂಡಿಸಿದರು.

ಕಲ್ಲಡ್ಕ ಪ್ರಭಾಕರ ಭಟ್ ಪರ ವಕೀಲರು ಕೂಡ ವಾದ ಮಂಡಿಸಿದರು. ಸರ್ಕಾರಿ ವಕೀಲರು ಕೂಡ ತಮ್ಮ ವಾದ ಮಂಡಿಸಿದರು. ಇಂದು ಕಲ್ಲಡ್ಕ ಭಟ್ ಅವರ ನಿರೀಕ್ಷಣಾ ಜಾಮೀನಿನ ಅರ್ಜಿಯ ವಾದ ಪ್ರತಿವಾದ ಮುಕ್ತಾಯಗೊಂಡಿದ್ದು, ನ್ಯಾಯಾಲಯ ಆದೇಶವನ್ನು ಜನವರಿ 17 ಕ್ಕೆ ಕಾಯ್ದಿರಿಸಿದೆ. .

Join Whatsapp
Exit mobile version