ಕಲಬುರಗಿ: ಭಾರತ ಚುನಾವಣಾ ಆಯೋಗವು 2024-25ನೇ ಸಾಲಿನ ಅತ್ಯುತ್ತಮ ಚುನಾವಣಾ ಪದ್ಧತಿ ಅಳವಡಿಸಿಕೊಂಡು ಅನುಷ್ಠಾನಕ್ಕೆ ತಂದಿದ್ದಕ್ಕಾಗಿ ಅಧಿಕಾರಿಗಳು ಮತ್ತು ಸಂಸ್ಥೆಗಳಿಗೆ ಪ್ರಶಸ್ತಿ ಘೋಷಿಸಿದ್ದು, ಜನರಲ್ ಕೆಟಗರಿ ವಿಭಾಗದಲ್ಲಿ ಕಲಬುರಗಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಚುನಾವಣಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರಿಗೆ ಪ್ರಶಸ್ತಿ ಘೋಷಿಸಿದೆ.
ಈ ಕುರಿತು ರಾಜ್ಯದ ಮುಖ್ಯ ಚುನಾವಣಾಧಿಕಾರಿಗಳಿಗೆ ಪತ್ರ ಬರೆದಿರುವ ಭಾರತ ಚುನಾವಣಾ ಆಯೋಗವು, ಇದೇ ಜನವರಿ 25 ರಂದು ನವದೆಹಲಿಯ ದೆಹಲಿ ಕಂಟೋನ್ಮೆಂಟ್ ಪ್ರದೇಶದ ಮಾಣಿಕಶಾ ಸೆಂಟರ್ನಲ್ಲಿ ನಡೆಯುವ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದ್ದು, ಪ್ರಶಸ್ತಿ ಪುರಸ್ಕರು ಅಗಮಿಸಲು ಅಧಿಕೃತ ಆಹ್ವಾನ ನೀಡುವಂತೆ ತಿಳಿಸಿದೆ.
ಜನರಲ್ ಕೆಟಗರಿಯಲ್ಲಿ 11, ವಿಶೇಷ ಕೆಟಗರಿಯಲ್ಲಿ 3, ಅತ್ಯುತ್ತಮ ನಿರ್ವಹಣೆಗೆ 3 ಮತ್ತು ರಾಜ್ಯದ ಸಿ.ಇ.ಓಗಳಿಗೆ ಹಾಗೂ ಅತ್ಯುತ್ತಮ ಇಲಾಖೆಗಳ ಭಾಗದಲ್ಲಿ ಕೇಂದ್ರದ ಎನ್.ಐ.ಸಿ, ರೈಲ್ವೆ ಹಾಗೂ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಇಲಾಖೆಗೆ ಚುನಾವಣಾ ಆಯೋಗ ಪ್ರಶಸ್ತಿ ಘೋಷಿಸಿದೆ.