ಬೆಳಗಾವಿ: ಮತಾಂತರ ನಿಷೇಧ ಕಾಯ್ದೆಯನ್ನು ಹಿಂಬಾಗಿಲ ಮೂಲಕ ಜಾರಿಗೆ ತರಲು ಸರ್ಕಾರ ಮುಂದಾಗಿದೆ. ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಬಿಜೆಪಿಯ ನಾಯಕರು. ಹೆಸರಿಗೆ ಮಾತ್ರ ಸ್ಪೀಕರ್ ಆಗಿ ಆ ಸ್ಥಾನಕ್ಕೆ ಅಗೌರವ ತರುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಗೇರಿ ಅವರು ಸ್ಪೀಕರ್ ಸ್ಥಾನದಲ್ಲಿ ಯಾಕೆ ಕೂತಿದ್ದಾರೆ? ಪಕ್ಷದ ಬಾವುಟ ಹಾಕಿಕೊಂಡು ಕೂರಬಹುದಿತ್ತಲ್ಲವೇ? ‘ ಎಂದು ಕುಟುಕಿದರು.
ಇದು ಬಸವಣ್ಣನವರ ನಾಡು. 12ನೇ ಶತಮಾನದಲ್ಲಿ ಎಲ್ಲ ವರ್ಗದ ಜನರನ್ನು ಒಟ್ಟುಗೂಡಿಸಿ ಲಿಂಗಾಯತ ಧರ್ಮ ಎಂದು ಒಂದು ಪರಂಪರೆ ಆರಂಭಿಸಿ, ಕ್ರಾಂತಿಕಾರಿ ಬದಲಾವಣೆ ತಂದಿದ್ದರು. ಈ ನಾಡಿಗೆ ದೊಡ್ಡ ಹೆಸರು ತಂದುಕೊಟ್ಟರು.
ಪೊರಕೆ ಹಿಡಿದವರು ನೀರು ಮುಟ್ಟುವ ಅವಕಾಶ ಇಲ್ಲದಿದ್ದಾಗ, ಸರಿಸಮಾನವಾಗಿ ಲಿಂಗ ಧಾರಣೆ ಮಾಡಿದ್ದರು. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕೂಡ ಬೌದ್ಧ ಧರ್ಮಕ್ಕೆ ಮತಾಂತರ ಆದಾಗ ಯಾರೂ ಒತ್ತಡ ಹೇರಿರಲಿಲ್ಲ. ಅವರ ವಿಚಾರಧಾರೆಗಳನ್ನು ಪ್ರೀತಿಯಿಂದ ಹಂಚಿದ್ದರು.
ಇಂದು ಶರಣರ ಸಂಸ್ಕೃತಿಗೆ ಮುಖ್ಯಮಂತ್ರಿಗಳು ಹಾಗೂ ಬಿಜೆಪಿಯಿಂದ ದ್ರೋಹವಾಗಿದೆ. ಎಲ್ಲ ಮಠಾಧಿಪತಿಗಳನ್ನೇ ಕೇಳಿ. ಅವರು ಕರೆ ಮಾಡಿ ಏನಾಗುತ್ತಿದೆ ಎನ್ನುತ್ತಿದ್ದಾರೆ. ಬಸವಣ್ಣನ ನಾಡಿನಲ್ಲಿ ಅವರ ತತ್ವಕ್ಕೆ ದ್ರೋಹ ಬಗೆಯುತ್ತಿದ್ದೀರಿ. ನೀವೇ ಬಸವಣ್ಣನ ತತ್ವ ಮರೆಯುತ್ತಿದ್ದೀರಿ. ಸಿಎಂ ಕೂಡ ಬಸವ ಎಂದು ಹೆಸರಿಟ್ಟುಕೊಂಡು ಬಸವಣ್ಣನವರ ಅನುಯಾಯಿಗಳು ಎಂದು ಹೇಳಿಕೊಳ್ಳುತ್ತಾರೆ. ಆದರೆ ಈ ಸರಕಾರ ಮಾಡಲು ಹೊರಟಿರುವುದಾದರೂ ಏನನ್ನು?
ಇಬ್ಬರು ಪರಸ್ಪರ ಪ್ರೀತಿಸಿ ಮದುವೆಯಾದಾಗ ಬೇರೊಬ್ಬರು ದೂರು ನೀಡಿದರೆ ತನಿಖೆ ಮಾಡುತ್ತಾರಂತೆ. ತನಿಖೆ ಮುಗಿದ ನಂತರ ಇಬ್ಬರನ್ನು ನೀವು ಬೇರೆ ಮಾಡುತ್ತೀರಾ? ಬಿಜೆಪಿ ಅವರು ಅಂಬೇಡ್ಕರ್ ಹಾಗೂ ಬಸವಣ್ಣನವರ ತತ್ವದ ವಿಚಾರವಾಗಿ ಉತ್ತರ ನೀಡಲಿ ಎಂದು ಸವಾಲು ಹಾಕಿದರು.
ಶಿಕ್ಷಣ ಸಂಸ್ಥೆಗಳಲ್ಲಿ ಉಚಿತ ಶಿಕ್ಷಣ, ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ನೀಡುತ್ತೇವೆ ಎಂದರೆ ಕ್ರಮಕೈಗೊಳ್ಳುತ್ತೇವೆ ಎಂದು ಹೇಳುತ್ತಾರೆ. ಇದು ಎಲ್ಲ ಧರ್ಮಕ್ಕೂ ಅನ್ವಯವಾಗುತ್ತದೆಯೇ? ಪರಿಶಿಷ್ಟ ವರ್ಗ, ಪಂಗಡದವರ ವಿಚಾರವಾಗಿ ನೋಡಿದರೆ ಅನೇಕರು ಬೌದ್ಧ ಧರ್ಮ ಪಾಲಿಸುತ್ತಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರು ಬೌದ್ಧ ಧರ್ಮವನ್ನು ನಂಬಿದ್ದಾರೆ. ನಂಬಿಕೆ ಇದ್ದ ಎಲ್ಲರೂ ಇದಕ್ಕೆ ಸೇರುತ್ತಾರೆ.
ಸರಕಾರದ್ದು ಡ್ರಕೋನಿಯಂ ಕಾನೂನಿನಂತಾಗಿದೆ. ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಎಂದರೆ ಏನು? ಜೈನರ ಕೈಗೆ ಧರ್ಮಸ್ಥಳದ ನಿಯಂತ್ರಣ ಯಾಕೆ ಹೋಯ್ತು? ಅವರು ಮಂಜುನಾಥ ಸ್ವಾಮಿಯನ್ನು ಆರಾಧಿಸುತ್ತಾರೆ. ಇದು ಅವರವರ ಇಚ್ಛೆ ಎಂದು ಹೇಳಿದರು.
ಸರ್ಕಾರದ ವೈಫಲ್ಯ ಮುಚ್ಚಿಕೊಳ್ಳಲು ಈ ಮಸೂದೆ ಮಂಡಿಸಿದ್ದಾರಾ? ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಕೆಪಿಸಿಸಿ ಅಧ್ಯಕ್ಷರು, ‘ನಾವು ಬಿಟ್ ಕಾಯಿನ್, ಶೇ. 40 ಲಂಚ, ಕೋವಿಡ್ ಪರಿಹಾರ ನೀಡದಿರುವುದು, ರೈತರಿಗೆ ಪರಿಹಾರ ಸಿಗದ ವಿಚಾರ, ಉತ್ತರ ಕರ್ನಾಟಕದ ಸಮಸ್ಯೆಗಳನ್ನು ಚರ್ಚಿಸುವ ಮೊದಲು ಈ ಕಾಯ್ದೆ ತರುವ ಆತುರ ಏನಿತ್ತು? ಚುನಾವಣೆಯಲ್ಲಿ ಸೋಲುತ್ತಿರುವುದರಿಂದ ತಮ್ಮ ವೈಫಲ್ಯ ಮುಚ್ಚಿಹಾಕಲು ಪ್ರಯತ್ನಿಸುತ್ತಿದ್ದಾರೆ. ನಾವು ಸದನ ಪ್ರವೇಶಿಸುವ ಮುನ್ನ, ಸಚಿವರು ಉತ್ತರ ನೀಡುವ ಮುನ್ನ ಈ ಮಸೂದೆ ಮಂಡಿಸಿದ್ದು ಯಾಕೆ? ಕಾಗೇರಿ ಅವರು ಸ್ಪೀಕರ್ ಸ್ಥಾನದಲ್ಲಿ ಯಾಕೆ ಕೂತಿದ್ದಾರೆ? ಪಕ್ಷದ ಬಾವುಟ ಹಾಕಿಕೊಂಡು ಕೂರಬಹುದಿತ್ತಲ್ಲವೇ? ‘ ಎಂದು ಮರುಪ್ರಶ್ನಿಸಿದರು.
ಸ್ಪೀಕರ್ ಏಕಪಕ್ಷೀಯವಾಗಿ ನಡೆದುಕೊಂಡರೆ ಎಂಬ ಪ್ರಶ್ನೆಗೆ, ‘ಅವರು ಸ್ಪೀಕರ್ ಅಲ್ಲ. ಅವರು ಬಿಜೆಪಿಯ ನಾಯಕರು. ಹೆಸರಿಗೆ ಮಾತ್ರ ಸ್ಪೀಕರ್ ಆಗಿ ಆ ಸ್ಥಾನಕ್ಕೆ ಅಗೌರವ ತರುತ್ತಿದ್ದಾರೆ. ಅದೇ ಕಾರಣಕ್ಕೆ ಮಸೂದೆ ಪ್ರತಿ ಹರಿದು ಹಾಕಿದೆ. ಅವರು ಏನು ಬೇಕಾದರೂ ಮಾಡಿಕೊಳ್ಳಲಿ. ಇದು ನನ್ನ ರಾಜಕೀಯ ಬದ್ಧತೆ. ಇದು ಕೇವಲ ಧರ್ಮದ ವಿಚಾರ ಅಲ್ಲ, ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನ ವಿರೋಧ ನೀತಿ’ ಎಂದು ಶಿವಕುಮಾರ್ ವಾಗ್ದಾಳಿ ನಡೆಸಿದರು.
ಸದನದಲ್ಲಿ ಯಾವ ಹೋರಾಟ ಮಾಡುತ್ತೀರಿ ಎಂಬ ಪ್ರಶ್ನೆಗೆ, ‘ನಾವಿದನ್ನು ಸುಮ್ಮನೆ ಬಿಡುವುದಿಲ್ಲ. ಚರ್ಚೆ ಮಾಡುತ್ತೇವೆ. ಕ್ರೈಸ್ತ, ಮುಸಲ್ಮಾನ ಧರ್ಮದ ಮೇಲೆ ಮಾತನಾಡುತ್ತಾರೆ. ದೇಶದಲ್ಲಿ ಕ್ರೈಸ್ತರ ಜನಸಂಖ್ಯೆ ಶೇ.2 ರಷ್ಟಿದೆ. ಆದರೂ ಅವರ ಶಿಕ್ಷಣ ಸಂಸ್ಥೆಗೆ ತಮ್ಮ ಮಕ್ಕಳನ್ನು ಯಾಕೆ ಸೇರಿಸುತ್ತಾರೆ. ಪೋರ್ಚುಗೀಸ್ ಹಾಗೂ ಬ್ರಿಟಿಷರು 600 ವರ್ಷ, ಮೊಘಲರು ಸುಮಾರು 700 ವರ್ಷ ದೇಶ ಆಳಿದ್ದಾರೆ. ಆದರೂ ದೇಶದಲ್ಲಿ ಅವರ ಸಂಖ್ಯೆ ಯಾಕೆ ಹೆಚ್ಚಾಗಿಲ್ಲ? ಸುಮ್ಮನೆ ನಮಗೆ ತೊಂದರೆ ಆಯಿತು ಎಂದು ಹೇಳಿದರೆ ಹೇಗೆ? ಕೇಂದ್ರ ಹಾಗೂ ರಾಜ್ಯ ಸಚಿವರ ಪಟ್ಟಿ ನೋಡಿ, ಅನೇಕರು ತಮ್ಮ ಮಕ್ಕಳನ್ನು ಕ್ರೈಸ್ತ ಶಿಕ್ಷಣ ಸಂಸ್ಥೆಯಲ್ಲಿ ಓದಿಸುತ್ತಿದ್ದಾರೆ. ನೂರಾರು ಮಂದಿ ಅಲ್ಲಿ ಶಿಕ್ಷಣ ಪಡೆಯಲು ಅರ್ಜಿ ಹಾಕುತ್ತಿದ್ದಾರೆ. ಇದುವರೆಗೂ ಅಲ್ಲಿ ಯಾವುದಾದರೂ ಒಂದು ಬಲವಂತದ ಮತಾಂತರ ದೂರು ದಾಖಲಾಗಿದೆಯಾ? ಇದು ಕೇವಲ ಒಂದು ಸಮುದಾಯವನ್ನು ಗುರಿಯಾಗಿಸಿ ತೊಂದರೆ ನೀಡುವ ಪ್ರಯತ್ನ’ ಎಂದು ಉತ್ತರಿಸಿದರು.