Home ಟಾಪ್ ಸುದ್ದಿಗಳು ‘ಮಾನವ ಹಕ್ಕುಗಳ ವ್ಯಾಪಕ ಉಲ್ಲಂಘನೆ’: ವಿಶ್ವಸಂಸ್ಥೆಗೆ ಪತ್ರ ಬರೆದ ಡಾ.ಕಫೀಲ್ ಖಾನ್

‘ಮಾನವ ಹಕ್ಕುಗಳ ವ್ಯಾಪಕ ಉಲ್ಲಂಘನೆ’: ವಿಶ್ವಸಂಸ್ಥೆಗೆ ಪತ್ರ ಬರೆದ ಡಾ.ಕಫೀಲ್ ಖಾನ್

ಹೊಸದಿಲ್ಲಿ: ಗೋರಖ್‌ಪುರದ ಡಾ.ಕಫೀಲ್ ಖಾನ್, ಯೋಗಿ ಆದಿತ್ಯನಾಥ್ ಸರಕಾರದ ವಿರುದ್ಧದ ಯುದ್ಧವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದಿದ್ದಾರೆ. ಕಟ್ಟುನಿಟ್ಟಾದ ರಾಷ್ಟ್ರೀಯ ಭದ್ರತಾ ಕಾಯ್ದೆ(ಎನ್‌ಎಸ್‌ಎ) ಅಡಿಯಲ್ಲಿ ಆರೋಪಗಳಿಂದ ಮುಕ್ತರಾಗಿ ಇದೀಗ ಜೈಪುರದಲ್ಲಿ ವಾಸಿಸುತ್ತಿರುವ ಖಾನ್, ಭಾರತದಲ್ಲಿ ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಮಾನದಂಡಗಳ ವ್ಯಾಪಕ ಉಲ್ಲಂಘನೆ ಮತ್ತು ಭಿನ್ನಾಭಿಪ್ರಾಯವನ್ನು ಹತ್ತಿಕ್ಕಲು ಎನ್‌ಎಸ್‌ಎ ಮತ್ತು ಯುಎಪಿಯಂತಹ ಕಠಿಣ ಕಾನೂನುಗಳ ದುರುಪಯೋಗದ ಬಗ್ಗೆ ಕಫೀಲ್ ಖಾನ್, ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸಮಿತಿ (UNHRC) ಗೆ ಪತ್ರ ಬರೆದಿದ್ದಾರೆ.

‘‘ಸಿಎಎ ವಿರುದ್ಧ ಶಾಂತಿಯುತವಾಗಿ ಪ್ರತಿಭಟನೆ’’ ನಡೆಸಿದ್ದಕ್ಕಾಗಿ ಬಂಧಿಸಲ್ಪಟ್ಟ ಸಾಮಾಜಿಕ ಕಾರ್ಯಕರ್ತರ ಮಾನವ ಹಕ್ಕುಗಳನ್ನು ರಕ್ಷಿಸಲು ಭಾರತ ಸರಕಾರವನ್ನು ಆಗ್ರಹಿಸಿದ್ದಕ್ಕಾಗಿ ಮತ್ತು ‘‘ಸರಕಾರ ಅವರ ಮನವಿಯನ್ನು ಆಲಿಸಿಲ್ಲ’’ ಎಂದು ಹೇಳಿದ್ದಕ್ಕಾಗಿ ಖಾನ್ ತಮ್ಮ ಪತ್ರದಲ್ಲಿ ಯುನ್‌ಎಚ್‌ಆರ್‌ಸಿಗೆ ಧನ್ಯವಾದ ಅರ್ಪಿಸಿದ್ದಾರೆ.

ಜೈಲಿನಲ್ಲಿದ್ದ ತಮ್ಮ ದಿನಗಳನ್ನು ವಿವರಿಸಿದ ಖಾನ್, ‘‘ನನ್ನನ್ನು ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸಿಸಲಾಗಿತ್ತು. ಹಲವು ದಿನಗಳವರೆಗೆ ಆಹಾರ ಮತ್ತು ನೀರನ್ನು ನಿರಾಕರಿಸಲಾಗಿತ್ತು. ಕಿಕ್ಕಿರಿದ ಮಥುರಾ ಜೈಲಿನಲ್ಲಿ ನನ್ನ 7 ತಿಂಗಳ ಜೈಲುವಾಸದ ಸಮಯದಲ್ಲಿ ಅಮಾನವೀಯವಾಗಿ ವರ್ತಿಸಲಾಗಿದೆ. ಅದೃಷ್ಟವಶಾತ್, ನನ್ನ ಬಂಧನಗಳ ವಿಸ್ತರಣೆಯನ್ನು ಹೈಕೋರ್ಟ್ ರದ್ದುಪಡಿಸಿದ್ದು, ಇಡೀ ಪ್ರಕ್ರಿಯೆಯನ್ನು ಕಾನೂನುಬಾಹಿರ ಎಂದು ಕರೆದಿದೆ’’ ಎಂದು ಹೇಳಿದ್ದಾರೆ.

 2017 ಆಗಸ್ಟ್ 10ರಂದು ಬಾಬಾ ರಾಘವ್ ದಾಸ್ ವೈದ್ಯಕೀಯ ಕಾಲೇಜಿನಲ್ಲಿ ಆಮ್ಲಜನಕ ಕೊರತೆಯಿಂದಾಗಿ ಅನೇಕ ಮಕ್ಕಳು ಪ್ರಾಣ ಕಳೆದುಕೊಂಡ ಗೋರಖ್‌ಪುರ ದುರಂತದ ಬಗ್ಗೆಯೂ ಅವರು ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ.

Join Whatsapp
Exit mobile version