ಕಾಬೂಲ್: ಕಾಬೂಲ್ ನ ಮಸೀದಿಯೊಂದರಲ್ಲಿ ಬುಧವಾರ ಸಂಜೆ ಪ್ರಾರ್ಥನೆಯ ವೇಳೆ ಸಂಭವಿಸಿದ ಭಾರಿ ಸ್ಫೋಟದಲ್ಲಿ ಹಲವರು ಮಂದಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.
ಈ ಘಟನೆ ವಾಯವ್ಯ ಕಾಬೂಲ್ ನ ಕೊತಾಲ್-ಇ- ಖೈರ್ ಖಾನಾದಲ್ಲಿ ನಡೆದಿದೆ. ಸ್ಫೋಟದಲ್ಲಿ ಸಾಕಷ್ಟು ಸಾವು-ನೋವುಗಳು ಸಂಭವಿಸಿವೆ, ಆದರೆ ಮೃತರ ಸಂಖ್ಯೆಗಳು ಇನ್ನೂ ಸ್ಪಷ್ಟವಾಗಿಲ್ಲ ಎಂದು ಕಾಬೂಲ್ ಪೊಲೀಸ್ ವಕ್ತಾರ ಖಾಲಿದ್ ಜದ್ರಾನ್ ತಿಳಿಸಿದ್ದಾರೆ.
ತಾಲಿಬಾನ್ ಗುಪ್ತಚರ ಅಧಿಕಾರಿಯೊಬ್ಬರು 20 ಮಂದಿ ಮೃತಪಟ್ಟಿದ್ದು, 40ಕ್ಕೂ ಅಧಿಕ ಮಂದಿ ಗಾಯಗೊಂಡಿರಬಹುದು ಹಾಗೂ ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗಬಹುದು ಎಂದು ಹೇಳಿದ್ದಾರೆ.
ಖೈರ್ ಖಾನಾ ಪ್ರದೇಶದಲ್ಲಿ ಸಂಜೆ ಪ್ರಾರ್ಥನೆ ವೇಳೆ ಸಂಭವಿಸಿದ ಸ್ಫೋಟದಲ್ಲಿ ಮಸೀದಿಯ ಇಮಾಮ್ ಸಹ ಮೃತಪಟ್ಟಿದ್ದಾರೆ. ಗಾಯಾಳುಗಳಿಗೆ ಕಾಬೂಲ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ ಎಂದು ತಿಳಿದು ಬಂದಿದೆ.
ದಾಳಿಯ ಹೊಣೆ ಯಾರೂ ಹೊತ್ತುಕೊಂಡಿಲ್ಲ. ಘಟನಾ ಸ್ಥಳಕ್ಕೆ ರಕ್ಷಣಾ ಪಡೆಗಳು ಆಗಮಿಸಿದ್ದು, ರಕ್ಷಣಾ ಮತ್ತು ಶೋಧ ಕಾರ್ಯ ನಡೆಸುತ್ತಿದ್ದಾರೆ ಎಂದು ಖಲೀದ್ ಜದ್ರಾನ್ ತಿಳಿಸಿದ್ದಾರೆ.