ವಿಶಿಷ್ಟಚೇತನ ಅಪೂರ್ವ ಪ್ರತಿಭೆ ಅಹ್ಮದ್ ಕಬೀರ್ ಮೂರ್ಜೆಗೆ ಸನ್ಮಾನ

Prasthutha|

ಮಂಗಳೂರು: ಹುಟ್ಟಿನಿಂದಲೇ ಅಂಗವೈಕಲ್ಯತೆ ಇದ್ದರೂ ಅವೆಲ್ಲವನ್ನು ಮೆಟ್ಟಿನಿಂತು ತನ್ನ ಪ್ರತಿಭೆಯನ್ನು ನಿರೂಪಿಸಿದ ಅದ್ಭುತ ಪ್ರತಿಭೆ ಅಹ್ಮದ್ ಕಬೀರ್ ಮೂರ್ಜೆಯವರನ್ನು ವಿವಿಧ ಸಂಘಟನೆಗಳು ಸನ್ಮಾನಿಸಿವೆ.

- Advertisement -


ಅಹ್ಮದ್ ಕಬೀರ್ ಹುಟ್ಟಿನಿಂದಲೇ ವಿಕಲಚೇತನರು. ನಡೆದಾಡಲು, ಎದ್ದು ನಿಲ್ಲಲು ತಲೆ ಎತ್ತಲು ಸಹ ಆಗುವುದಿಲ್ಲ. ಅವರ ಕತ್ತಿಗೂ ಬಲವಿಲ್ಲ. ಒಂದು ಚಮಚ ಕೂಡ ತನ್ನ ಕೈಯಿಂದ ಹಿಡಿಯಲು ಸಾಧ್ಯವಿಲ್ಲದ ಅವರು ತನ್ನ ಪ್ರತಿಯೊಂದು ಕಾರ್ಯಕ್ಕೂ ಇತರರನ್ನು ಆಶ್ರಯಿಸಬೇಕಾದ ಪರಿಸ್ಥಿತಿಯಲ್ಲಿದ್ದಾರೆ. ಶಾಲೆಯ ಮೆಟ್ಟಿಲನ್ನೇ ಹತ್ತಿಲ್ಲ. ಅಕ್ಷರಾಭ್ಯಾಸ ಮಾಡಿಲ್ಲ. ಇಷ್ಟೆಲ್ಲಾ ನ್ಯೂನ್ಯತೆಗಳ ಮಧ್ಯೆ ಚಲನೆ ಇರುವ ಕೇವಲ ಎರಡು ಬೆರಳುಗಳ ಸಹಾಯದಿಂದ ಮೊಬೈಲ್ ನಲ್ಲಿ ವೀಡಿಯೋ ಎಡಿಟಿಂಗ್, ಫೋಟೋ ಎಡಿಟಿಂಗ್ ಮಾಡುವ ಪ್ರತಿಭಾವಂತ. ಆನ್ ಲೈನ್ ನಲ್ಲಿ ವ್ಯಾಪಾರ ಮಾಡುವ ಕಲೆಯನ್ನು ಕರಗತ ಮಾಡಿಕೊಂಡಿರುವ ಅಹ್ಮದ್ ಕಬೀರ್ ಬಂದ ಸಂಪಾದನೆಯನ್ನು ಕಷ್ಟದಲ್ಲಿರುವವರಿಗೆ ಹಂಚುವ ಪರೋಪಕಾರಿ.


ಇಂಗ್ಲಿಷ್, ಹಿಂದಿ, ಕನ್ನಡ, ಬ್ಯಾರಿ, ಮಲಯಾಳಂ, ತಮಿಳು ಹೀಗೆ ವಿವಿಧ ಭಾಷೆಗಳಲ್ಲಿ ವ್ಯವಹರಿಸಬಲ್ಲರು. ದೈಹಿಕ ನ್ಯೂನ್ಯತೆಯನ್ನು ಮರೆತು ಸದಾ ಉತ್ಸಾಹದ ಬುಗ್ಗೆಯಂತೆ ಕ್ರಿಯಾಶೀಲರಾಗಿರುತ್ತಾರೆ. ಮುಂದೆ ತನ್ನದೇ ವೆಬ್ ಸೈಟ್, ಮೊಬೈಲ್ ಆ್ಯಪ್ ನಿರ್ಮಿಸಿಕೊಂಡು ತನ್ನ ವ್ಯವಹಾರವನ್ನು ವಿಸ್ತರಿಸುವ ಕನಸನ್ನು ಇಟ್ಟುಕೊಂಡಿದ್ದಾರೆ.

- Advertisement -


ಬಂಟ್ವಾಳ ತಾಲ್ಲೂಕಿನ ಮೂರ್ಜೆ ಕಂಚಿನೋಡಿ ನಿವಾಸಿ ಅಬ್ಬಾಸ್ ಮತ್ತು ಆಮಿನಾ ದಂಪತಿಯ 21 ವರ್ಷ ಪ್ರಾಯದ ಪುತ್ರ ಅಹ್ಮದ್ ಕಬೀರ್ ಅವರ ನಿವಾಸಕ್ಕೆ ಭೇಟಿ ನೀಡಿದ ಕಣ್ಣೂರು ಆಂಗ್ಲ ಮಾಧ್ಯಮ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಮತ್ತು ಸುನ್ನಿ ಸಂದೇಶದ ನಿರ್ದೇಶಕರಾದ ಹಾಜಿ ಅಬ್ದುಲ್ ಮಜೀದ್ ಸಿತಾರ್ ಅಹ್ಮದ್ ಕಬೀರ್ ಶಾಲು ಹೊದಿಸಿ ಸ್ಮರಣಿಕೆ ನೀಡಿ ಸನ್ಮಾನಿಸಿದರು.
ಬುರೂಜ್ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷರಾದ ಶೇಕ್ ರಹ್ಮತುಲ್ಲಾ ನಗದು ಪುರಸ್ಕಾರವನ್ನು ನೀಡಿ ಅಭಿನಂದಿಸಿದರು. ಈ ವೇಳೆ ಸಮಾಜ ಸೇವಕ ರಫೀಕ್ ಮಾಸ್ಟರ್, ಮುಹಮ್ಮದ್ ಫಹದ್, ಮಫಾಝ್ ಸಿತಾರ್, ಅಹ್ಮದ್ ಕಬೀರ್ ಅವರ ಚಿಕ್ಕಪ್ಪ ಅಬ್ದುಲ್ ಹಮೀದ್ ಮೊದಲಾದವರು ಉಪಸ್ಥಿತರಿದ್ದರು.

ಕಳೆದ ವಾರವಷ್ಟೇ ಕಬೀರ್ ಅಹ್ಮದ್ ಅವರ ಸಂದರ್ಶನ ಪ್ರಸ್ತುತ ಯೂಟ್ಯೂಬ್ ಚಾನೆಲ್ ನಲ್ಲಿ ಪ್ರಸಾರವಾಗಿತ್ತು.



Join Whatsapp