ಚಂಡೀಗಡ: ರಾಜಸ್ತಾನದ ಜುನೈದ್ ಮತ್ತು ನಾಸಿರ್ ಅಪಹರಣ, ಹತ್ಯೆ ಪ್ರಕರಣದ ಸಂಬಂಧ ರಾಜಸ್ತಾನದ ಪೊಲೀಸರು ಹರಿಯಾಣದ ನುಹ್ ಜಿಲ್ಲೆಯ ಮೂವರು ಪೊಲೀಸ್ ಮಾಹಿತಿದಾರರ ಮೇಲೆ ಪ್ರಕರಣ ದಾಖಲಿಸಿದ್ದು, ಆ ಮೂವರು ಪೊಲೀಸ್ ದಾಳಿಯಲ್ಲೂ ಭಾಗವಹಿಸುತ್ತಿದ್ದರು ಎಂದು ತಿಳಿದುಬಂದಿದೆ.
ಪೊಲೀಸ್ ಇನ್ಪಾರ್ಮರ್’ಗಳಾದ ರಿಂಕು ಸೈನಿ, ಲೋಕೇಶ್ ಸಿಂಗ್ಲಾ ಮತ್ತು ಶ್ರೀಕಾಂತ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ನುಹ್ ಜಿಲ್ಲೆಯ ಫಿರೋಜ್’ಪುರ್ ಜಿರ್ಕಾ ಮತ್ತು ನಗೀನಾ ಪೊಲೀಸ್ ಠಾಣೆಗಳಲ್ಲಿ ಇವರಿಂದ ಕಳೆದ ಎರಡು ತಿಂಗಳುಗಳಲ್ಲಿ ನಾಲ್ಕು ಎಫ್ ಐಆರ್’ಗಳು ದಾಖಲಾಗಿರುವುದು ತಿಳಿದು ಬಂದಿದೆ.
ಜುನೈದ್, ನಾಸಿರ್ ಕೊಲೆಯ ಆರೋಪಿಗಳಲ್ಲಿ ಈ ಮೂವರು ಕೂಡ ಭಾಗಿಯಾಗಿದ್ದರು. ಇನ್ನೊಬ್ಬ ಮೋನು ಮನೇಸರ್ ಎಂಬ ಬಜರಂಗ ದಳದ ವ್ಯಕ್ತಿ ಕೂಡ ಪ್ರಮುಖ ಆರೋಪಿ. ಈತನು ಗುರುಗಾಂವ್’ನ ಹರಿಯಾಣ ಸರಕಾರದ ಗೋರಕ್ಷಕ ಪಡೆಯ ಮುಖ್ಯಸ್ಥನೂ ಆಗಿದ್ದಾನೆ. ಈಗ ರಾಜಸ್ತಾನ ಪೊಲೀಸರು ಆರೋಪಿಗಳ ಪಟ್ಟಿಗೆ ಇನ್ನೂ ಎಂಟು ಜನರ ಹೆಸರನ್ನು ಸೇರಿಸಿದ್ದಾರೆ.
ಈ ಮೂವರು ಆರೋಪಿಗಳು ಪೊಲೀಸರ ಸುತ್ತುಮುತ್ತಲೇ ಇರುವವರು ಎಂದು ತಿಳಿದು ಬಂದಿದೆ. ಈ ಮೂವರ ಹೇಳಿಕೆಯಂತೆ ಫೆಬ್ರವರಿ 14ರ ಬೆಳಿಗ್ಗೆ 10.30 ಗಂಟೆಗೆ ಫಿರೋಜ್’ಪುರ ಠಾಣೆಯಲ್ಲಿ ದನ ಸಾಗಣೆದಾರರು ಎಂದು ಮೊಕದ್ದಮೆ ದಾಖಲಿಸಲಾಗಿದೆ. ಅನಂತರ ನಾಸಿರ್, ಜುನೈದ್ ರನ್ನು ಅಪಹರಿಸಲಾಗಿದೆ.
ಐವರು ನುಹ್ ಅಗೋನ್ ಗ್ರಾಮದ ಬಳಿ ರಾಜಸ್ತಾನಕ್ಕೆ ದನ ಸಾಗಿಸುತ್ತಿದ್ದಾರೆ ಎಂಬುದು ಪೊಲೀಸ್ ಇನ್ಫಾರ್ಮರ್ ಹಾಗೂ ಗೋರಕ್ಷಕರ ಹೇಳಿಕೆ.
ಎಫ್’ಐಆರ್ ಪ್ರಕಾರ ಬ್ಯಾರಿಕೇಡ್ ಗಳನ್ನು ಇಡಲಾಯಿತು. ರಿಂಕು ಹೇಳಿದಂತೆ ಒಂದು ಪಿಕ್ ಅಪ್ ಟ್ರಕ್ ತಡೆಯಲಾಯಿತು. ಪೊಲೀಸರನ್ನು ನೋಡಿ ಪಿಕ್ ಅಪ್ ಟ್ರಕ್ ಹಿಂದಕ್ಕೆ ತಿರುಗಿದೆ. ಆದರೆ ಟ್ರಾಫಿಕ್ ಕಾರಣಕ್ಕೆ ಚಾಲಕ ಮತ್ತು ನಾಲ್ವರು ಅದರಿಂದ ಹಾರಿ ಪರಾರಿಯಾದರು ಎಂದು ಎಫ್ಐಆರ್ ನಮೂದಿಸಲಾಗಿದೆ.
ರಿಂಕು ಆ ಐವರನ್ನು ಗುರುತಿಸಿದ್ದು, ಅವರ ಮೇಲೆ 2015ರ ಹರಿಯಾಣ ಗೋವಂಶ ಸಂರಕ್ಷಣಾ ಮತ್ತು ಗೋಸಂವರ್ಧನಾ ಕಾಯ್ದೆ ಹಾಗೂ ಪ್ರಾಣಿ ಹಿಂಸೆ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.