Home ಟಾಪ್ ಸುದ್ದಿಗಳು ಪತ್ರಕರ್ತ ಝುಬೈರ್ ಗೆ ಮಧ್ಯಂತರ ಜಾಮೀನು ಮಂಜೂರು

ಪತ್ರಕರ್ತ ಝುಬೈರ್ ಗೆ ಮಧ್ಯಂತರ ಜಾಮೀನು ಮಂಜೂರು

ನವದೆಹಲಿ: ಉತ್ತರ ಪ್ರದೇಶದ ಸೀತಾಪುರದಲ್ಲಿ ದಾಖಲಾಗಿದ್ದ ಪ್ರಕರಣ ಸಂಬಂಧ ಆಲ್ಟ್ ನ್ಯೂಸ್ ಸಹ ಸಂಪಾದಕ ಮುಹಮ್ಮದ್ ಝುಬೈರ್ ಅವರಿಗೆ ಸುಪ್ರೀಂಕೋರ್ಟ್ ಮಧ್ಯಂತರ ಜಾಮೀನು ನೀಡಿದೆ.


ಅಲಹಾಬಾದ್ ಹೈಕೋರ್ಟ್ ತೀರ್ಪು ಪ್ರಶ್ನಿಸಿ ಝುಬೈರ್ ಸಲ್ಲಿಸಿದ್ದ ಅರ್ಜಿ ಸಂಬಂಧ ಸುಪ್ರೀಂಕೋರ್ಟ್ ಉತ್ತರ ಪ್ರದೇಶ ಪೊಲೀಸರಿಗೆ ನೋಟಿಸ್ ಜಾರಿ ಮಾಡಿದೆ.

ಹಿಂದೂ ಧಾರ್ಮಿಕ ಮುಖಂಡರನ್ನು ದ್ವೇಷ ಬಿತ್ತುವವರು ಎಂದು ಉಲ್ಲೇಖಿಸಿದ್ದರ ಸಂಬಂಧ ಉತ್ತರ ಪ್ರದೇಶದ ಸೀತಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಬಂಧನಕ್ಕೊಳಗಾಗಿರುವ ಝುಬೈರ್ ಅವರು ತಮ್ಮ ವಿರುದ್ಧದ ಪ್ರಕರಣ ಪ್ರಶ್ನಿಸಿ ಹಾಗೂ ಜಾಮೀನು ನೀಡುವಂತೆ ಕೋರಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು.
ಸುಪ್ರೀಂಕೋರ್ಟ್ ವಿಭಾಗೀಯ ಪೀಠದ ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ ಮತ್ತು ಜೆ.ಕೆ.ಮಹೇಶ್ವರಿ ಅವರಿದ್ದ ಪೀಠ, ದೆಹಲಿ ಕೋರ್ಟ್ ವ್ಯಾಪ್ತಿಯಿಂದ ಹೊರಗೆ ಹೋಗಬಾರದು ಎಂದು ಷರತ್ತುವಿಧಿಸಿ ಐದು ದಿನಗಳ ಮಧ್ಯಂತರ ಜಾಮೀನು ನೀಡಿದೆ.
ಆದಾಗ್ಯೂ ಎಫ್ಐಆರ್ ವಿರುದ್ಧದ ತನಿಖೆಗೆ ತಡೆ ನೀಡಲು ನಿರಾಕರಿಸಿತು.

“ಸೀತಾಪುರ ಜೆಎಂಎಫ್‌ಸಿ ನ್ಯಾಯಾಲಯವು ಜುಲೈ 7ರಂದು ಮಾಡಿರುವ ಆದೇಶವನ್ನು ಇಂಗ್ಲಿಷ್‌ ಗೆ ಭಾಷಾಂತರಿಸಿ, ಜಾಮೀನು ಮನವಿಯ ಕೋರಿಕೆಗಳನ್ನು ತಿರಸ್ಕರಿಸಿರುವ ಆದೇಶದ ಜೊತೆಗೆ ನ್ಯಾಯಾಲಯಕ್ಕೆ ಸಲ್ಲಿಸಬೇಕು. ಜೆಎಂಎಫ್‌ ಸಿ ವಿಧಿಸುವ ಷರತ್ತುಗಳಿಗೆ ಒಳಪಟ್ಟು ಆರೋಪಿಗೆ ಐದು ದಿನಗಳ ಮಧ್ಯಂತರ ಜಾಮೀನು ಮಂಜೂರು ಮಾಡಲಾಗಿದೆ” ಎಂದು ನ್ಯಾಯಾಲಯವು ಆದೇಶಿಸಿದೆ.

ಸೀತಾಪುರ ಜೆಎಂಎಫ್‌ ಸಿ ನ್ಯಾಯಾಲಯದ ನ್ಯಾಯಾಧೀಶರು ವಿಧಿಸುವ ಷರತ್ತುಗಳ ಜೊತೆಗೆ ಆರೋಪಿಯು ಟ್ವೀಟ್‌ ಮಾಡುವಂತಿಲ್ಲ. ವ್ಯಾಪ್ತಿ ಹೊಂದಿರುವ ನ್ಯಾಯಾಲಯದ ಸರಹದ್ದಿನಿಂದ ಹೊರಹೋಗುವಂತಿಲ್ಲ ಎಂಬ ಷರತ್ತುಗಳನ್ನು ಸುಪ್ರೀಂ ಕೋರ್ಟ್‌ ವಿಧಿಸಿದೆ.

ದೆಹಲಿ ಪೊಲೀಸರು ದಾಖಲಿಸಿರುವ ಮತ್ತೊಂದು ಪ್ರಕರಣದಲ್ಲಿ ಸಿಲುಕಿರುವ ಜುಬೈರ್‌ ಅವರು ದೆಹಲಿ ಪೊಲೀಸರಿಗೆ ಶರಣಾಗಬೇಕಿದೆ. ಮಹಾಂತ ಬಜರಂಗ ಮುನಿ, ಯತಿ ನರಸಿಂಗಾನಂದ ಮತ್ತು ಸ್ವಾಮಿ ಆನಂದ್‌ ಸ್ವರೂಪ್‌ ಅವರನ್ನು ದ್ವೇಷ ಹರಡುವವರು ಎಂದು ಟ್ವೀಟ್‌ ಮಾಡುವ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲಾಗಿದೆ ಎಂದು ಉತ್ತರ ಪ್ರದೇಶದ ಸೀತಾಪುರ ಪೊಲೀಸರು ಝುಬೈರ್‌ ವಿರುದ್ಧ ಎಫ್‌ ಐಆರ್‌ ದಾಖಲಿಸಿದ್ದಾರೆ.

ಝುಬೈರ್‌ ವಿರುದ್ಧ ಐಪಿಸಿ ಸೆಕ್ಷನ್‌ 295A (ಯಾವುದೇ ಧರ್ಮ ಅಥವಾ ಧಾರ್ಮಿಕ ನಂಬಿಕೆಗಳನ್ನು ಅವಮಾನಿಸಿ ಧಾರ್ಮಿಕ ಭಾವನೆಗಳನ್ನು ಉದ್ದೇಶಪೂರ್ವಕಾಗಿ ಕೆರಳಿಸುವ ಕೆಲಸ) ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆ ಸೆಕ್ಷನ್‌ 67 (ವಿದ್ಯುನ್ಮಾನ ಮಾದರಿಯಲ್ಲಿ ಆಕ್ಷೇಪಾರ್ಹ ವಿಚಾರಗಳ ವರ್ಗಾವಣೆ) ಅಡಿ ಪ್ರಕರಣ ದಾಖಲಿಸಲಾಗಿದೆ. ಎಫ್‌ ಐಆರ್‌ ರದ್ದುಪಡಿಸುವಂತೆ ಝುಬೈರ್‌ ಅವರು ಅಲಹಾಬಾದ್‌ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಆದರೆ, ಇದಕ್ಕೆ ಹೈಕೋರ್ಟ್‌ ನಿರಾಕರಿಸಿದ್ದರಿಂದ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಾಗಿದೆ.

ಇದೇ ಪ್ರಕರಣದಲ್ಲಿ ಗುರುವಾರ ಝುಬೈರ್‌ ಅವರಿಗೆ ಜಾಮೀನು ನಿರಾಕರಿಸಿದ್ದ ಸೀತಾಪುರ ನ್ಯಾಯಾಲಯವು ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಿತ್ತು. ಆರೋಪಿಯು ಸಾಕ್ಷಿಗಳನ್ನು ಪ್ರಭಾವಿಸುವ ಸಾಧ್ಯತೆಯ ಜೊತೆಗೆ ಅಪರಾಧಗಳನ್ನು ಪುನರಾವರ್ತಿಸುವ ಸಾಧ್ಯತೆಯಿಂದ ಜಾಮೀನು ನೀಡಲಾಗದು ಎಂದು ನ್ಯಾಯಾಧೀಶ ಅಭಿನವ್‌ ಶ್ರೀವಾಸ್ತವ ಹೇಳಿದ್ದರು.

ಸ್ಥಳೀಯ ನ್ಯಾಯಾಲಯವು ಝುಬೈರ್‌ಗೆ ಜಾಮೀನು ತಿರಸ್ಕರಿಸಿದೆ. ಆದರೆ, ಈ ಅಂಶವನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಮನವಿಯಲ್ಲಿ ಉಲ್ಲೇಖಿಸಲಾಗಿಲ್ಲ ಎಂದು ಪ್ರಾಥಮಿಕ ಆಕ್ಷೇಪಣೆಯನ್ನು ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರು ಎತ್ತಿದರು.

Join Whatsapp
Exit mobile version