ಮುಂಬೈ: ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ರಾಜಾಪುರ ಪ್ರದೇಶದ ಪತ್ರಕರ್ತ 48ರ ಹರೆಯದ ಶಶಿಕಾಂತ್ ವಾರಿಸೆ ಅವರನ್ನು ಮಂಗಳವಾರ ವಾಹನ ನುಗ್ಗಿಸಿ ಹತ್ಯೆ ಮಾಡಲಾಗಿದೆ.
ಪ್ರಧಾನಿ, ಮುಖ್ಯಮಂತ್ರಿ ಸೇರಿದಂತೆ ಗಣ್ಯ ವ್ಯಕ್ತಿಗಳೊಂದಿಗೆ ಫೋಟೋ ಹೊಂದಿರುವ ಆರೋಪಿಯನ್ನು ಕೂಡಲೇ ಬಂಧಿಸಲಾಗಿದ್ದು, ಆತನ ಅಪರಾಧದ ಬಗ್ಗೆ ಸೋಮವಾರ ಶಶಿಕಾಂತ್ ಒಂದು ಲೇಖನ ಬರೆದಿರುವುದೇ ಈ ಕೊಲೆಗೆ ಕಾರಣ ಎಂದು ಪೊಲೀಸರು ಹೇಳಿದ್ದಾರೆ.
ಸ್ಥಳೀಯ ಮರಾಠಿ ಸುದ್ದಿ ಪತ್ರಿಕೆಯೊಂದರಲ್ಲಿ ವರದಿಗಾರನಾಗಿ ಕೆಲಸ ಮಾಡುವ ಶಶಿಕಾಂತ್ ವಾರಿಸೆ ಅವರು ತನ್ನ ತಾಯಿ, ಪತ್ನಿ, 19ರ ಹರೆಯದ ಮಗನನ್ನು ಅಗಲಿದ್ದಾರೆ. ಬರ್ಸುನಲ್ಲಿರುವ ಆರ್ ಆರ್ ಪಿಸಿಎಲ್- ರತ್ನಗಿರಿ ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ ಸಂಬಂಧ ಲೇಖನಗಳನ್ನು ಇತ್ತೀಚೆಗೆ ಬರೆಯುತ್ತಿದ್ದರು. ಅದನ್ನು ಒಂದು ಸ್ಥಳೀಯರ ಗುಂಪು ವಿರೋಧಿಸುತ್ತಿತ್ತು.
ವಾಹನ ಹಾಯಿಸಿ ಕೊಲೆ ಮಾಡಿದ ವ್ಯಕ್ತಿ ಪಂಡರಿನಾಥ ಅಂಬೇಕರ್. ಮಹಾನಗರಿ ಟೈಮ್ಸ್’ನಲ್ಲಿ ಶಶಿಕಾಂತ್ ಅವರು ‘ಫೋಟೋ ಆಫ್ ಕ್ರಿಮಿನಲ್ ಎಲಾಂಗ್ ಸೈಡ್ ಪಿಎಂ, ಸಿಎಂ ಆಂಡ್ ಡಿಸಿಎಂ ಕ್ಲೈಮ್ ಫಾರ್ಮರ್ಸ್ ಪ್ರೊಟೆಸ್ಟಿಂಗ್ ರಿಫೈನರಿ’ ಲೇಖನ ಬರೆದಿದ್ದರು. ರೈತರು ರಿಫೈನರಿ ಬಗ್ಗೆ ಪ್ರತಿಭಟಿಸುತ್ತಿರುವಾಗ ಪ್ರಧಾನಿ, ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಜೊತೆಯಲ್ಲಿ ಅಪರಾಧಿಯ ಫೋಟೋ ಎಂಬ ಲೇಖನ ಅದಾಗಿತ್ತು.
ಪಂಡರಿನಾಥ ಅಂಬೇಕರ್ ಅವರನ್ನು ಲೇಖನದಲ್ಲಿ ಅಪರಾಧಿ ಎಂದು ಬರೆಯಲಾಗಿದೆ. ರಿಫೈನರಿ ವಿರುದ್ಧ ಹೋರಾಡುವ ರೈತರನ್ನು ಬೆದರಿಸಿದ್ದಕ್ಕಾಗಿ ಅಂಬೇಕರ್ ವಿರುದ್ಧ ಎಫ್’ಐಆರ್ ದಾಖಲಾಗಿರುವುದನ್ನೂ ಲೇಖನದಲ್ಲಿ ಉಲ್ಲೇಖಿಸಲಾಗಿತ್ತು.
ಸೋಮವಾರ ರಾತ್ರಿ ರಾಜಾಪುರದಲ್ಲಿ ಪೆಟ್ರೋಲ್ ಬಂಕ್ ಪಕ್ಕದಲ್ಲಿ ಶಶಿಕಾಂತ ಅವರು ನಿಂತಿದ್ದಾಗ ಅಂಬೇಕರ್ ವಾಹನವನ್ನು ಅವರ ಮೇಲೆ ನುಗ್ಗಿಸಿ ಹತ್ಯೆ ಮಾಡಿದ್ದಾನೆ. ನುಗ್ಗಿದ ವಾಹನವು ಶಶಿಕಾಂತರನ್ನು ಹಲವು ಮೀಟರ್ ದೂರದವರೆಗೆ ಎಳೆದುಕೊಂಡು ಹೋಗಿದೆ. ಸ್ಥಳೀಯರು ಓಡಿ ಬರುತ್ತಲೇ ಅಂಬೇಕರ್ ಎಲ್ಲವನ್ನೂ ಬಿಟ್ಟು ಓಡಿದ್ದಾನೆ. ಜನರು ಕೂಡಲೆ ಶಶಿಕಾಂತರನ್ನು ಆಸ್ಪತ್ರೆಗೆ ಸಾಗಿಸಿದರಾದರೂ, ಮಂಗಳವಾರ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.
ಕೂಡಲೆ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಅಂಬೇಕರ್’ಗೆ ಫೆಬ್ರವರಿ 14ರವರೆಗೆ ಪೊಲೀಸ್ ಕಸ್ಟಡಿ ನೀಡಲಾಗಿದೆ ಎಂದು ರತ್ನಗಿರಿಯ ಪೊಲೀಸ್ ಸೂಪರಿನ್ ಟೆಂಡೆಂಟ್ ಧನಂಜಯ ಕುಲಕರ್ಣಿ ತಿಳಿಸಿದರು.
“ವಿಷಯ ತಿಳಿಯುತ್ತಲೇ ನಾವು ಕರ್ತವ್ಯ ತತ್ಪರರಾದೆವು. ಮಂಗಳವಾರ ಮುಂಜಾನೆಯೇ ಅಪರಾಧಿಯನ್ನು ಬಂಧಿಸಿ ಬೆಳಿಗ್ಗೆ ಕೋರ್ಟಿನೆದುರು ನಿಲ್ಲಿಸಿದೆವು. ಕೋರ್ಟ್ ಫೆಬ್ರವರಿ 14ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿದೆ. ತನಿಖೆ ನಡೆಯುತ್ತಿದೆ” ಎಂದು ಕುಲಕರ್ಣಿ ಹೇಳಿದರು.