Home ಕರಾವಳಿ ‘ಕರ್ನಾಟಕ ಯುವ ರತ್ನ ಗೌರವ’ಕ್ಕೆ ಪತ್ರಕರ್ತ, ಕವಿ, ಲೇಖಕ ಶಂಶೀರ್ ಬುಡೋಳಿ ಆಯ್ಕೆ

‘ಕರ್ನಾಟಕ ಯುವ ರತ್ನ ಗೌರವ’ಕ್ಕೆ ಪತ್ರಕರ್ತ, ಕವಿ, ಲೇಖಕ ಶಂಶೀರ್ ಬುಡೋಳಿ ಆಯ್ಕೆ

ಮಂಗಳೂರು: 13 ನೇ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ-2023 ರ ‘ಕರ್ನಾಟಕ ಯುವ ರತ್ನ ಗೌರವ’ ಕ್ಕೆ ಪತ್ರಕರ್ತ, ಕವಿ, ಲೇಖಕ, ನಿರೂಪಕ ಶಂಶೀರ್ ಬುಡೋಳಿ ಆಯ್ಕೆಯಾಗಿದ್ದಾರೆ ಎಂದು ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿಯ ರಾಜ್ಯಾಧ್ಯಕ್ಷರಾದ ಡಾ.ಶೇಖರ ಅಜೆಕಾರು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಮಾರ್ಚ್ 5 ರಂದು ಮೂಲ್ಕಿಯ ಪುನರೂರು ಶ್ರೀ ವಿಶ್ವನಾಥ ದೇವಾಲಯದ ಆವರಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಗೌರವ ಪ್ರದಾನ ಮಾಡಲಾಗುವುದೆಂದು ತಿಳಿಸಿದ್ದಾರೆ. ಶಂಶೀರ್ ಬುಡೋಳಿ ಅವರು ಸಾಹಿತ್ಯ, ಮಾಧ್ಯಮ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ಈ ಗೌರವಕ್ಕೆ ಆಯ್ಕೆ ಮಾಡಲಾಗಿದೆ. ಹೈಸ್ಕೂಲ್ ವಿದ್ಯಾರ್ಥಿಯಾಗಿದ್ದಾಗಲೇ ಪತ್ರಿಕೆಗಳಿಗೆ ಬರೆಯುತ್ತಿದ್ದ ಇವರ ಅನೇಕ ಲೇಖನ, ಕವನ, ಲಘುಬರಹಗಳು ಕನ್ನಡದ ಎಲ್ಲಾ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. 2009 ರಲ್ಲಿ ನಡೆದ 11 ನೇ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಅಲ್ಲದೇ ರಾಜ್ಯ ಸರ್ಕಾರದ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ಕ್ರಿಯಾಶೀಲವಾಗಿ ಗುರುತಿಸಿಕೊಂಡಿದ್ದಾರೆ. ‘ಪಿರ್ಸತ್ತೊ ಪಲಕ’ ಎಂಬ ಬ್ಯಾರಿ ಭಾಷೆಯಲ್ಲಿ ಚೊಚ್ಚಲ ಕವನ ಸಂಕಲನ ಕೂಡಾ ಪ್ರಕಟಗೊಂಡಿವೆ. ಅಲ್ಲದೇ ಕನ್ನಡದಲ್ಲಿ ‘ಆಕಾಶ-ತಾಯಿ’, ‘ವನಸುಮಗಳು’, ‘ಮುಗಿಲ ಮಾಲೆ’, ‘ನೇತ್ರಾವತಿ’ ಕನ್ನಡ ಕವನ ಸಂಕಲನದಲ್ಲಿ ಇವರ ಕವನ ಪ್ರಕಟಗೊಂಡಿವೆ. ಬ್ಯಾರಿ ಕಾವ್ಯ ಸಂಪುಟದಲ್ಲೂ ಇವರ ಕವನ ಪ್ರಕಟಗೊಂಡಿವೆ. ಪದವಿ ವಿದ್ಯಾರ್ಥಿಯಾಗಿದ್ದಾಗಲೇ ಇವರು ‘ರೋಲ್ ಆಫ್ ಯುವವಾಣಿ ಇನ್ ರೂರಲ್ ಏರಿಯಾ’ ಮತ್ತು ‘ಡಾ‌.ಹಾ.ಮಾ.ನಾಯಕ್ – ಬದುಕು ಬರಹ ಮತ್ತು ಪುಸ್ತಕ ಪ್ರೀತಿ’ ಹೀಗೆ ವಿವಿಧ ವಿಷಯದಡಿಯಲ್ಲಿ ಪದವಿ, ಸ್ನಾತಕೋತ್ತರ ಪದವಿಯಲ್ಲಿ ಕಿರು ಸಂಶೋಧನೆ ಮಾಡಿದ್ದರು. ಉಜಿರೆ ಎಸ್ ಡಿಎಂ ಕಾಲೇಜಿನಲ್ಲಿ ಪದವಿ, ಮೈಸೂರು ಮುಕ್ತ ವಿವಿಯಲ್ಲಿ ಡಿಪ್ಲೊಮಾ ಇನ್‌ ಜರ್ನಲಿಸಂ ಹಾಗೂ ಕೊಣಾಜೆ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಎಂಸಿಜೆ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಸದ್ಯ ಮೈಸೂರಿನಲ್ಲಿ ಪಿಎಚ್ ಡಿ ಸಂಶೋಧನೆ ಮಾಡುತ್ತಿದ್ದಾರೆ. ಮಂಗಳೂರಿನ ಯೆನೆಪೋಯ ವಿವಿ ಬೋರ್ಡ್ ಆಫ್ ಸ್ಟಡೀಸ್ ನ ಸದಸ್ಯರಾಗಿದ್ದಾರೆ. ಸಮಾಜ ಸೇವೆಯ ದೃಷ್ಟಿಯಿಂದ ‘ಶಂಶೀರ್ ಬುಡೋಳಿ ಫೌಂಡೇಶನ್’ ಕೂಡಾ ಸ್ಥಾಪಿಸಿದ್ದಾರೆ. ಸದ್ಯ ಝೀ ಕನ್ನಡ ನ್ಯೂಸ್ ಚಾನೆಲ್ ನ ದಕ್ಷಿಣ ಕನ್ನಡ ಜಿಲ್ಲಾ ವರದಿಗಾರರಾಗಿರುವ ಇವರು ರಾಜ್ ನ್ಯೂಸ್, ಪಬ್ಲಿಕ್ ಟಿವಿ, ಸುವರ್ಣ ನ್ಯೂಸ್, ಟಿವಿ9, ಸುದ್ದಿ ಟಿವಿ ಹಾಗೂ ವಾರ್ತಾಭಾರತಿ ಪತ್ರಿಕೆಯಲ್ಲಿ ಪತ್ರಕರ್ತರಾಗಿ ಕಾರ್ಯನಿರ್ವಹಿಸಿದ್ದರು. ಸನ್ಮಾರ್ಗ ಚಾನೆಲ್ ನ ಆಂಕರ್ ಆಗಿ ಗುರುತಿಸಿಕೊಂಡಿದ್ದಾರೆ. ಅಲ್ಲದೇ ವಿವಿಧ ಸಾಮಾಜಿಕ ಸುದ್ದಿ ಜಾಲತಾಣಗಳಲ್ಲಿ ವಾಯ್ಸ್ ಓವರ್ ಆರ್ಟಿಸ್ಟ್ ಆಗಿ ಗುರುತಿಸಿಕೊಂಡಿದ್ದಾರೆ. ರಾಷ್ಟ್ರ ಮಟ್ಟದ ವಿಚಾರ ಸಂಕಿರಣ, ಕವಿಗೋಷ್ಟಿಗಳಲ್ಲಿ ಕವನ ವಾಚಿಸಿರುವ ಇವರನ್ನು ಅನೇಕ ಕಡೆ ಸನ್ಮಾನಿಸಲಾಗಿದೆ. ಇವರು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬುಡೋಳಿ ನಿವಾಸಿ ಧರ್ಮಗುರು ಇಬ್ರಾಹಿಂ ಫಾಝಿಲ್ ಹನೀಫಿ ಹಾಗೂ ಕೈರುನ್ನೀಸಾ ದಂಪತಿಯ ಪುತ್ರ.

Join Whatsapp
Exit mobile version