ಲಿಕ್ಕರ್ ಮಾಫಿಯಾ ವಿರುದ್ಧ ವರದಿ ಪ್ರಕಟಿಸಿದ್ದ ವರದಿಗಾರ
ಲಕ್ನೋ: ಲಿಕ್ಕರ್ ಮಾಫಿಯಾದ ವಿರುದ್ಧ ವರದಿ ಮಾಡಿದ್ದ ಹಿನ್ನೆಲೆಯಲ್ಲಿ ತಮಗೆ ಬೆದರಿಕೆ ಇದೆ ಎಂದು ಪೊಲೀಸ್ ಅಧಿಕಾರಿಗಳಿಗೆ ಪತ್ರ ಬರೆದ ಮರು ದಿನವೇ ಪತ್ರಕರ್ತರೊಬ್ಬರು ಸಂಶಯಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಪ್ರತಾಪ್ ಘಡ ಜಿಲ್ಲೆಯಲ್ಲಿ ಭಾನುವಾರ ರಾತ್ರಿ ನಡೆದಿದೆ.
ಸುಲಭ್ ಶ್ರೀವಾಸ್ತವ ಬೈಕ್ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದರೂ, ಅವರ ಸಾವಿನಲ್ಲಿ ಅನುಮಾನಗಳಿಗೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಎಬಿಪಿ ನ್ಯೂಸ್ ಮತ್ತು ಅದರ ಪ್ರಾದೇಶಿಕ ಅಂಗ, ಎಬಿಪಿ ಗಂಗಾದಲ್ಲಿ ಕೆಲಸ ಮಾಡುತ್ತಿದ್ದ ಸುಲಭ್ ಶ್ರೀವಾಸ್ತವ ಅವರು ಸಾವಿಗೆ ಒಂದು ದಿನ ಮೊದಲು, ತಮಗೆ ಬೆದರಿಕೆ ಇದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಪತ್ರ ಬರೆದಿದ್ದರು.
” ಶ್ರೀವಾಸ್ತವ ಅವರು ಭಾನುವಾರ ರಾತ್ರಿ 11 ಗಂಟೆ ಸುಮಾರಿಗೆ ಕಚೇರಿ ಕೆಲಸ ಮುಗಿಸಿದ ನಂತರ ತಮ್ಮ ಬೈಕ್ ನಲ್ಲಿ ಹಿಂದಿರುಗುತ್ತಿದ್ದರು. ಈ ವೇಳೆ ಅವರು ಬೈಕ್ ನಿಂದ ಕೆಳಗೆ ಬಿದ್ದಿದ್ದಾರೆ. ಕೆಲವು ಕಾರ್ಮಿಕರು ಅವರನ್ನು ರಸ್ತೆಯಿಂದ ಮೇಲಕ್ಕೆತ್ತಿ ನಂತರ ಅವರ ಸ್ನೇಹಿತರನ್ನು ಕರೆ ಮಾಡಿ ವಿಷಯ ತಿಳಿಸಿದರು. ಬಳಿಕ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ವೈದ್ಯರು ಸಾವನ್ನಪ್ಪಿದ್ದಾರೆ ಘೋಷಿಸಿದ್ದಾರೆ ಎಂದು ಪ್ರತಾಪಗಢ ಹಿರಿಯ ಪೊಲೀಸ್ ಅಧಿಕಾರಿ ಸುರೇಂದ್ರ ದ್ವಿವೇದಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
“ಪ್ರಾಥಮಿಕ ತನಿಖೆಯಲ್ಲಿ ಅವರು ತಮ್ಮ ಬೈಕ್ನಲ್ಲಿ ಒಬ್ಬರೇ ಬರುತ್ತಿದ್ದರು. ರಸ್ತೆಯ ಹಂಪ್ ಗೆ ಡಿಕ್ಕಿ ಹೊಡೆದು ನಂತರ ಕೆಳಗೆ ಬಿದ್ದಿದ್ದಾರೆ. ಇತರ ಕೋನಗಳನ್ನು ಸಹ ತನಿಖೆ ಮಾಡುತ್ತಿದ್ದೇವೆ” ಎಂದು ದ್ವಿವೇದಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.