ಹುಬ್ಬಳ್ಳಿ: ಧರ್ಮ ಯುದ್ಧದಲ್ಲಿ ನಮ್ಮ ಗೆಲುವು ಕಟ್ಟಿಟ್ಟ ಬುತ್ತಿ ಎಂದು ಕೇಂದ್ರ ಸಚಿವ, ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಜೋಷಿ ವಿರುದ್ದ ಬಂಡಾಯವಾಗಿ ಸ್ಪರ್ಧಿಸುತ್ತಿರುವ ಫಕೀರೇಶ್ವರ ಮಠದ ದಿಂಗಾಲೇಶ್ವರ ಶ್ರೀ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಮುಖಂಡರ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಕ್ಷೇತ್ರದ ಮನೆ ಮನೆಯಲ್ಲಿ ಸ್ವಾಮೀಜಿಯನ್ನ ಬೆಂಬಲಿಸಬೇಕು ಅನ್ನೋ ಮಾತು ಕೇಳಿ ಬರುತ್ತಿದೆ. ಧರ್ಮಯುದ್ಧದಲ್ಲಿ ನಾವು ಗೆದ್ದೇ ಗೆಲ್ಲುತ್ತೇವೆ. ರಾಜ್ಯ ರೈತ ಸಂಘ ಹಸಿರು ಸೇನೆ ಬೆಂಬಲ ನೀಡಿರುವುದು ಆನೆಬಲ ತಂದಂತಾಗಿದೆ ಎಂದು ಹೇಳಿದರು.
ನಾವು ಯಾವುದೇ ಮುಖಂಡರ ಜೊತೆಗೆ ಚರ್ಚೆಗೆ ಹೋಗಲ್ಲ. ನಾವು ಹೋಗುವುದು ಮತದಾರರ ಎದುರಿಗೆ ಮಾತ್ರ. ನಾನು ಸ್ಪರ್ಧಿಸುತ್ತಿರುವುದಕ್ಕೆ ಎಲ್ಲ ಸಮಾಜಗಳ ನೊಂದ ಜನರು ಖುಷಿಪಟ್ಟಿದ್ದಾರೆ. ನಮಗೆ ಗೆಲುವಿನ ವಿಶ್ವಾಸ ಆದರೆ, ಜೋಶಿ ಅವರಿಗೆ ಸೋಲಿನ ಭಯ ಕಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಇಷ್ಟು ದಿನ ಬೇಡವಾದವರು ಈಗ ಬೇಕಾಗಿದ್ದೇವೆಯೇ ಅಂತ ಜನ ಇವರಿಗೆ ಉಗುಳುತ್ತಿದ್ದಾರೆ. ಮಠದ ಪೀಠದಲ್ಲೂ ಇರುತ್ತೇನೆ ಚುನಾವಣಾ ಕಣದಲ್ಲೂ ಇರುತ್ತೇನೆ ಎಂದು ತಮ್ಮ ಸ್ಪರ್ಧೆಯನ್ನು ಮತ್ತೊಮ್ಮೆ ಖಚಿತಪಡಿಸಿದರು.