Home ಟಾಪ್ ಸುದ್ದಿಗಳು ಜೋಕಟ್ಟೆಯಲ್ಲಿ ತಡೆಗೋಡೆ ಕುಸಿದು ಬಾಲಕ ಮೃತ್ಯು; ಮುಂಜಾಗ್ರತಾ ಕ್ರಮ ಕೈಗೊಳ್ಳಲು ಜಿಲ್ಲಾಡಳಿತ ವಿಫಲ: ಎಸ್‌ಡಿಪಿಐ

ಜೋಕಟ್ಟೆಯಲ್ಲಿ ತಡೆಗೋಡೆ ಕುಸಿದು ಬಾಲಕ ಮೃತ್ಯು; ಮುಂಜಾಗ್ರತಾ ಕ್ರಮ ಕೈಗೊಳ್ಳಲು ಜಿಲ್ಲಾಡಳಿತ ವಿಫಲ: ಎಸ್‌ಡಿಪಿಐ

ಮಂಗಳೂರು: ದ.ಕ ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ತಡೆಗೋಡೆಗಳು ಕುಸಿದು  ಬಿದ್ದು ಜೀವಹಾನಿಗಳು ಸಂಭವಿಸುತ್ತಿದೆ. ದಕ್ಷಿಣ ಕನ್ನಡ  ಜಿಲ್ಲಾಡಳಿತ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಸಂಪೂರ್ಣ  ವಿಫಲವಾಗಿದೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ದ.ಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಮಾಲ್ ಜೋಕಟ್ಟೆ  ಆರೋಪಿಸಿದರು.

ನಿನ್ನೆ ತಡರಾತ್ರಿ ಜೋಕಟ್ಟೆಯಲ್ಲಿ ಮನೆಯ ಮೇಲೆ ತಡೆಗೋಡೆ ಬಿದ್ದು ಬಾಲಕನೋರ್ವ ಮೃತಪಟ್ಟು ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕೆಲ ದಿನಗಳ ಹಿಂದೆ ಉಳ್ಳಾಲ ತಾಲೂಕಿನ ಕುತ್ತಾರು ಸಮೀಪ  ತಡೆಗೋಡೆ ಬಿದ್ದು ಒಂದೇ ಕುಟುಂಬದ ನಾಲ್ಕು ಸದಸ್ಯರು ಮೃತಪಟ್ಟ ಬಳಿಕವೂ  ಜಿಲ್ಲಾಡಳಿತ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ವಿಫಲವಾಗಿದೆ. ಅದರ ನಂತರ ಅನೇಕ ಕಡೆ ತಡೆಗೋಡೆ ಕುಸಿದಿದೆ. ಮಳೆ ಬರುವ ಮುನ್ಸೂಚನೆ ಇರುವಾಗ ಕೇವಲ ಶಾಲೆಗೆ ರಜೆ ಕೊಟ್ಟ ಮಾತ್ರಕ್ಕೆ ಜಿಲ್ಲಾಡಳಿತದ ಕೆಲಸ ಮುಗಿಯುವುದಿಲ್ಲ. ಅಪಾಯಕಾರಿ ತಡೆಗೋಡೆ,  ಜರಿಯುವ ಸಾಧ್ಯ ಇರುವ ಬೆಟ್ಟ ಗುಡ್ಡ ಪ್ರದೇಶಗಳನ್ನು ಗುರುತಿಸಿ ಅಲ್ಲಿಂದ ಜನರನ್ನು ಸುರಕ್ಷಿತ ಜಾಗಕ್ಕೆ  ಸ್ಥಳಾಂತರ ಮಾಡಿ ಅವರಿಗೆ  ಸೂಕ್ತ ವ್ಯವಸ್ಥೆಗಳನ್ನು ಮಾಡಬೇಕು, ಅಪಾಯಕಾರಿ  ಪ್ರದೇಶಗಳನ್ನು ಪತ್ತೆ ಹಚ್ಚಿ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಸ್ಥಳೀಯಾಡಳಿತಗಳಿಗೆ ಅಥವಾ ಜಿಲ್ಲಾಡಳಿತದಿಂದ ನೇಮಿಸಲ್ಪಟ್ಟ ವಿಶೇಷ  ತಂಡಗಳಿಗೆ ಜಿಲ್ಲಾಡಳಿತ ನಿರ್ದೇಶನ ನೀಡಬೇಕು ಎಂದು ಅವರು ಆಗ್ರಹಿಸಿದರು.

ಜೋಕಟ್ಟೆಯಲ್ಲಿ ತಡೆಗೋಡೆ ಕುಸಿತದಿಂದ ಮೃತಪಟ್ಟ ಬಾಲಕ ಬಡ ಕುಟುಂಬದವನಾಗಿದ್ದು,  ಆತನ ಕುಟುಂಬಕ್ಕೆ ಹಾಗೂ ಗಾಯಗೊಂಡವರಿಗೆ ಗರಿಷ್ಟ ಪರಿಹಾರವನ್ನು ಸರಕಾರ  ಒದಗಿಸಬೇಕು ಮತ್ತು  ತಡೆಗೋಡೆ ಕುಸಿತದಿಂದ ಮನೆ ಭಾಗಶಃ ಹಾನಿಯಾಗಿರುವುದರಿಂದ ಪುನರ್ವಸತಿ  ಕಲ್ಪಿಸಬೇಕೆಂದು ಜಮಾಲ್ ಜೋಕಟ್ಟೆ ಜಿಲ್ಲಾಡಳಿತವನ್ನು  ಒತ್ತಾಯಿಸಿದರು.

Join Whatsapp
Exit mobile version