ಹೊಸದಿಲ್ಲಿ: ಅಕ್ಟೋಬರ್ 7ರಂದು ರಾಷ್ಟ್ರೀಯ ಪ್ರತಿಭಟನಾ ದಿನಾಚರಣೆ ಆಚರಿಸಲು ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆ ಕರೆ ನೀಡಿದೆ. ಕೇಂದ್ರದಲ್ಲಿ ಆಳ್ವಿಕೆ ನಡೆಸುತ್ತಿರುವ ಸರಕಾರ ಭಾರತವನ್ನು ಮಾರಾಟಕ್ಕೆ ಇಟ್ಟಿದೆ, ಭಾರತವನ್ನು ಉಳಿಸುವುದು ಕಾರ್ಮಿಕ ವರ್ಗದ ಮುಂದಿರುವ ಕಾರ್ಯಭಾರ ಎಂದು 10 ಕೇಂದ್ರೀಯ ಕಾರ್ಮಿಕ ಸಂಘಗಳು ಮತ್ತು ಹಲವು ವಲಯವಾರು ಸ್ವತಂತ್ರ ಒಕ್ಕೂಟಗಳು ಮತ್ತು ಸಂಘಗಳ ಜಂಟಿ ವೇದಿಕೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಪ್ರಕಟಿಸಿರುವ ‘ರಾಷ್ಟ್ರೀಯ ನಗದೀಕರಣ ಕ್ರಮ ಸರಣಿ(ನ್ಯಾಷನಲ್ ಮೊನೆಟೈಸೇಷನ್ ಪೈಪ್ಲೈನ್-ಎನ್ಎಂಪಿ) ಸೇರಿದಂತೆ ಕೇಂದ್ರ ಸರಕಾರದ ರಾಷ್ಟ್ರ-ವಿರೋಧಿ, ಜನ-ವಿರೋಧಿ ವಿಧ್ವಂಸಕಾರೀ ಪರಿಯೋಜನೆಗಳ ವಿರುದ್ಧ ನಿರ್ಣಾಯಕ ಪ್ರತಿರೋಧ ಹೋರಾಟವನ್ನು ನಡೆಸಲು ನಿರ್ಧರಿಸಿದೆ. ಈ ಕುರಿತ ಮಾರ್ಗನಿಕಾಶೆಗಳನ್ನು ರೂಪಿಸಿದ್ದು ಅದರ ಬಾಗವಾಗಿ ಅಕ್ಟೋಬರ್ 7ರಂದು ‘ರಾಷ್ಟ್ರೀಯ ಪ್ರತಿಭಟನಾ ದಿನ’ವನ್ನು ಆಚರಿಸಲು ಕಾರ್ಮಿಕ ವರ್ಗಕ್ಕೆ ಕರೆ ನೀಡಿದೆ. ಬೃಹತ್ ಮತಪ್ರದರ್ಶನ/ ಚಳುವಳಿ/ ಅಣಿನೆರಿಕೆಗಳ ಮೂಲಕ ದೇಶವ್ಯಾಪಿಯಾಗಿ ಅದನ್ನು ನಡೆಸಲಾಗುವುದು ಎಂದು ಅದು ಹೇಳಿದೆ.
ಅಲ್ಲದೆ, ದಸರಾದ ನಂತರ, ದೀಪಾವಳಿಯ ಮೊದಲ ಒಂದು ದಿನಾಂಕದಂದು ಸರಕಾರದ ಜನ-ವಿರೋಧಿ, ರಾಷ್ಟ್ರ-ವಿರೋಧಿ ಧೋರಣೆಗಳ ವಿರುದ್ಧ ನವದೆಹಲಿಯಲ್ಲಿ ಕಾರ್ಮಿಕರ ರಾಷ್ಟ್ರೀಯ ಸಮಾವೇಶ ನಡೆಸಲಾಗುವುದು. ಅದರಲ್ಲಿ ಸೂಕ್ತ ಸಮಯದಲ್ಲಿ ಬಹುದಿನಗಳ ಮುಷ್ಕರ ಕಾರ್ಯಾಚರಣೆಗೆ ಸಿದ್ಧತೆಯಾಗಿ ಮುಂದಿನ ಕಾರ್ಯಾಚರಣೆಗಳು/ಚಳುವಳಿಯನ್ನು ನಿರ್ಧರಿಸಲಾಗುವುದು ಎಂದಿದೆ.