ವಾಷಿಂಗ್ಟನ್ : ಜಗತ್ತಿಗೆ ಕೊರೊನ ಸೋಂಕು ಹೇಗೆ ತಟ್ಟಿತು ಎಂಬ ಬಗ್ಗೆ ತನಿಖೆ ನಡೆಸಿ, 90 ದಿನಗಳೊಳಗಾಗಿ ವರದಿ ಸಲ್ಲಿಸುವಂತೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ತಮ್ಮ ದೇಶದ ಗುಪ್ತಚರ ಸಂಸ್ಥೆಗಳಿಗೆ ಆದೇಶ ನೀಡಿದ್ದಾರೆ.
ಚೀನಾದ ವುಹಾನ್ ಲ್ಯಾಬ್ ನಿಂದ ವೈರಸ್ ಸೋರಿಕೆಯಾದ ಬಗ್ಗೆ ತನಿಖೆ ನಡೆಯಲೇ ಬೇಕು ಎಂಬ ವಿಶ್ವದ ವಿವಿಧ ರಾಷ್ಟ್ರಗಳಲ್ಲಿ ಒತ್ತಡ ಹೆಚ್ಚಿದುದರಿಂದ ಬೈಡನ್ ಈ ಸೂಚನೆ ನೀಡಿದ್ದಾರೆ. ಯಾವ ಆಧಾರ ಮತ್ತು ಕ್ಷೇತ್ರಗಳಲ್ಲಿ ತನಿಖೆ ಮುಂದುವರಿಸಬೇಕು ಎಂಬುದನ್ನು ನಿರ್ಧರಿಸುವಂತೆಯೂ ಅವರು ಗುಪ್ತಚರ ಸಂಸ್ಥೆಗಳಿಗೆ ಸೂಚಿಸಿದ್ದಾರೆ.
2019ರ ನವೆಂಬರ್ ನಲ್ಲಿ ವುಹಾನ್ ಇನ್ಸ್ ಟಿಟ್ಯೂಟ್ ಆಫ್ ವೈರಾಲಜಿಯಲ್ಲಿನ ಕೆಲವು ಸಂಶೋಧಕರು ಅಸೌಖ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು ಎಂಬ ಬಗ್ಗೆ ಹಲವು ವರದಿಗಳು ಪ್ರಕಟವಾಗಿರುವ ಬೆನ್ನಲ್ಲಿಯೇ ಬೈಡನ್ ಅವರ ಈ ಆದೇಶ ಹೊರಬಿದ್ದಿರುವುದು ಕುತೂಹಲವನ್ನುಂಟು ಮಾಡಿದೆ.