ಬೆಂಗಳೂರು: ಪ್ರತಿಷ್ಠಿತ ಜ್ಞಾನಪೀಠ ಪುರಸ್ಕಾರದ ಆಯ್ಕೆ ಪ್ರಕ್ರಿಯೆ ಆರಂಭಗೊಂಡಿದ್ದು, ಪ್ರಶಸ್ತಿಗಾಗಿ ಕನ್ನಡದ ಮೂವರು ದಿಗ್ಗಜರ ಹೆಸರುಗಳನ್ನು ಶಿಫಾರಸು ಮಾಡಲಾಗಿದೆ ಎಂದು ತಿಳಿದು ಬಂದಿದೆ. ಕರುನಾಡ ಸಾರಸ್ವತ ಲೋಕದ ದಿಗ್ಗಜರಾದ ಎಸ್.ಎಲ್.ಭೈರಪ್ಪ, ವೀರಪ್ಪ ಮೊಯ್ಲಿಗೆ ಮತ್ತು ಚೆನ್ನವೀರ ಕಣವಿ ಹೆಸರು ಶಿಫಾರಸುಗೊಂಡಿದೆ ಎಂದು ಮೂಲಗಳು ತಿಳಿಸಿವೆ.
ಈಗಾಗಲೇ ಕನ್ನಡಕ್ಕೆ ಎಂಟು ಜ್ಞಾನಪೀಠ ಪ್ರಶಸ್ತಿಗಳು ಸಂದಿವೆ. ಹಾಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರೂ ಆಗಿರುವ ಡಾ.ಚಂದ್ರಶೇಖರ್ ಕಂಬಾರರಿಗೆ 2010ರಲ್ಲಿ ಸಮಗ್ರ ಸಾಹಿತ್ಯದ ಕೊಡುಗೆಗಾಗಿ ಜ್ಞಾನಪೀಠ ಪ್ರಶಸ್ತಿ ನೀಡಲಾಗಿತ್ತು.
ಪ್ರಶಸ್ತಿ ಆಯ್ಕೆ ಸಂದರ್ಭದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಶಿಫಾರಸನ್ನು ಕೂಡ ಕೇಳಲಾಗುತ್ತದೆ. ಶಿಫಾರಸಾದ ಸಾಹಿತಿಗಳ ಕೃತಿಗಳನ್ನು ಪರಿಣತರಿಗೆ ನೀಡಿ ಮೌಲ್ಯಮಾಪನ ನಡೆಸಿ ಅನಂತರ ಪ್ರಶಸ್ತಿಗೆ ಅರ್ಹರನ್ನು ಆಯ್ಕೆ ಮಾಡಲಾಗುತ್ತಿದೆ ಎಂದು ಮೂಲಗಳು ಹೇಳಿವೆ.
ಕನ್ನಡದ ಜ್ಞಾನಪೀಠ ಪುರಸ್ಕೃತರು:
ಕುವೆಂಪು- ಶ್ರೀರಾಮಾಯಣ ದರ್ಶನಂ(1967), ದ.ರಾ.ಬೇಂದ್ರೆ- ನಾಕುತಂತಿ (1973), ಶಿವರಾಮ ಕಾರಂತ- ಮೂಕಜ್ಜಿಯ ಕನಸುಗಳು(1977), ಮಾಸ್ತಿ ವೆಂಕಟೇಶ ಅಯ್ಯಂಗಾರ್- ಸಮಗ್ರ ಸಾಹಿತ್ಯ: ವಿಶೇಷ ಉಲ್ಲೇಖ- ಚಿಕವೀರ ರಾಜೇಂದ್ರ (1983), ವಿ.ಕೃ.ಗೋಕಾಕ್- ಸಮಗ್ರ ಸಾಹಿತ್ಯ- ವಿಶೇಷ ಉಲ್ಲೇಖ: ಭಾರತ ಸಿಂಧುರಶ್ಮಿ (1990), ಯು.ಆರ್.ಅನಂತಮೂರ್ತಿ- ಸಮಗ್ರ ಸಾಹಿತ್ಯ (1994), ಗಿರೀಶ್ ಕಾರ್ನಾಡ್- ಸಮಗ್ರ ಸಾಹಿತ್ಯ (1998), ಡಾ.ಚಂದ್ರಶೇಖರ್ ಕಂಬಾರ- ಸಮಗ್ರ ಸಾಹಿತ್ಯ (2010)