ನವದೆಹಲಿ: ಜವಹರ್ ಲಾಲ್ ನೆಹರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಒಕ್ಕೂಟದ ಮಾಜಿ ಅಧ್ಯಕ್ಷ ಕನ್ಹಯ್ಯ ಕುಮಾರ್ ಮತ್ತು ರಾಷ್ಟ್ರೀಯ ದಲಿತ ಅಧಿಕಾರ್ ಮಂಚ್ ಶಾಸಕ ಜಿಗ್ನೇಶ್ ಮೆವಾನಿ ಇದೇ 28 ರಂದು ಕಾಂಗ್ರೆಸ್ ಸೇರ್ಪಡೆಯಾಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
2017ರ ವಿಧಾನಸಭಾ ಚುನಾವಣೆಯಲ್ಲಿ ಮೇವಾನಿ ಪ್ರಮುಖ ದಲಿತ ನಾಯಕನಾಗಿ ಹೊಮ್ಮಿದರು. ಪಾಟಿದಾರ್ ಸಮುದಾಯದ ಹಾರ್ದಿಕ್ ಪಟೇಲ್, ಠಾಕೂರ್ ಸಮುದಾಯದ ಅಲ್ಫೇಶ್ ಠಾಕೂರ್ ಹಾಗೂ ಜಿಗ್ನೇಶ್ ಎಂಬ ಮೂವರು ಯುವಕರು ಇಡೀ ಚುನಾವಣೆಯನ್ನು ಬೇರೊಂದು ದಿಕ್ಕಿನತ್ತ ತಿರುಗಿಸಿದ್ದರು. ಬಿಜೆಪಿ ವಿರುದ್ಧ ಈ ಮೂವರು ಯುವಕರು ನಡೆಸಿದ ತೀವ್ರ ವಾಗ್ದಾಳಿಯಿಂದಾಗಿ ಬಿಜೆಪಿ ಗೆಲುವಿನ ದಡ ತಲುಪಲು ತಿಣುಕಾಡಬೇಕಾಯಿತು.
ಜವಾಹರಲಾಲ್ ವಿ.ವಿ.ಯ ವಿದ್ಯಾರ್ಥಿ ಮುಖಂಡರಾಗಿದ್ದ ಕನ್ಹಯ್ಯ ಕುಮಾರ್ ಅವರ ಮೇಲೆ 2016ರಲ್ಲಿ ದೇಶದ್ರೋಹ ಪ್ರಕರಣವನ್ನು ದಾಖಲಿಸಿದ ಬಳಿಕ ಕನ್ಹಯ್ಯ, ರಾಷ್ಟ್ರಮಟ್ಟದಲ್ಲಿ ಕೇಳಿ ಬಂದಿತು. ಸರ್ಕಾರವನ್ನು ಕಟು ವಿಮರ್ಶೆಗೆ ಒಳಪಡಿಸುವ ಕನ್ಹಯ್ಯ ಯುವಜನರ ಮಾದರಿಯಾಗಿ ಹೊಮ್ಮಿದ್ದರು.
ಇತ್ತೀಚಿಗೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರನ್ನು ಭೇಟಿಯಾದ ಕನ್ಹಯ್ಯ ಕುಮಾರ್ ಈ ವಿಚಾರವಾಗಿ ಚರ್ಚೆ ನಡೆಸಿದ್ದಾರೆ. ಬಿಜೆಪಿ ವಿರುದ್ಧ ರಾಷ್ಟ್ರೀಯ ಆಂದೋಲನ ಕಾರ್ಯತಂತ್ರವನ್ನು ಪಕ್ಷ ರೂಪಿಸುತ್ತಿದ್ದು, ಈ ಯುವ ಮುಖಂಡರನ್ನೊಳಗೊಂಡ ತಂಡವೊಂದನ್ನು ರಾಹುಲ್ ಗಾಂಧಿ ರಚಿಸುತ್ತಿದ್ದಾರೆ ಎಂದು ಮೂಲಗಳು ಹೇಳಿವೆ.