Home ಟಾಪ್ ಸುದ್ದಿಗಳು ಮಕ್ಕಳ ಕಳ್ಳನೆಂದು ಭಾವಿಸಿ ಜಾರ್ಖಂಡ್ ನ ಯುವಕನ ಬರ್ಬರ ಕೊಲೆ: 6 ಮಂದಿಯ ಬಂಧನ

ಮಕ್ಕಳ ಕಳ್ಳನೆಂದು ಭಾವಿಸಿ ಜಾರ್ಖಂಡ್ ನ ಯುವಕನ ಬರ್ಬರ ಕೊಲೆ: 6 ಮಂದಿಯ ಬಂಧನ

ಬೆಂಗಳೂರು: ಮಕ್ಕಳ ಕಳ್ಳನೆಂದು ಭಾವಿಸಿ ರಾಮಮೂರ್ತಿನಗರ ಬಳಿ ಯುವಕನೊಬ್ಬನ ಮೇಲೆ ಗುಂಪು ಹಲ್ಲೆ ಮಾಡಿ ಕೊಲೆ ಮಾಡಲಾಗಿದ್ದು, ಈ ಸಂಬಂಧ ಕೆ.ಆರ್.ಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಾರ್ಖಂಡ್ನ ಸಂಜಯ್ ತುಡು (33) ಕೊಲೆಯಾದ ಯುವಕ. ನಗರದಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಸಂಜಯ್ ನನ್ನು ಮಕ್ಕಳ ಕಳ್ಳನೆಂದು ಭಾವಿಸಿ ಸ್ಥಳೀಯರು ಥಳಿಸಿದ್ದರು. ಪರಿಣಾಮ ತೀವ್ರ ಗಾಯಗೊಂಡು  ಸಂಜಯ್ ಮೃತಪಟ್ಟಿದ್ದಾರೆ’ ಎಂದು ವೈಟ್‌ಫೀಲ್ಡ್ ವಿಭಾಗದ ಡಿಸಿಪಿ ಗಿರೀಶ್ ತಿಳಿಸಿದ್ದಾರೆ.

ಹಲ್ಲೆ ನಡೆಸಿದ ಸಾರ್ವಜನಿಕರ ವಿರುದ್ಧ 302(ಕೊಲೆ) ಪ್ರಕರಣ ದಾಖಲಿಸಿಕೊಂಡು, ಸ್ಥಳದಲ್ಲಿದ್ದ 6 ಮಂದಿಯನ್ನು ವಶಕ್ಕೆ ಪಡೆದು ಬಂಧಿಸಲಾಗಿದೆ ಎಂದರು.

ಮಕ್ಕಳ ಕಳ್ಳರು ಬಂದಿದ್ದಾರೆಂದು ಕೆಲವರು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಇದರಿಂದಾಗಿ ಅಮಾಯಕರ ಮೇಲೆ ಹಲ್ಲೆಗಳು ನಡೆಯುತ್ತಿವೆ. ಇಂಥ ಸುದ್ದಿಗಳನ್ನು ಜನರು ನಂಬಬಾರದು. ಇಂಥ ಸುದ್ದಿ ಹಬ್ಬಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಸಿದರು.

ಎರಡು ದಿನಗಳ ಹಿಂದೆ ಸಂಜಯ್, ರಾಮಮೂರ್ತಿನಗರದ ರಸ್ತೆಯಲ್ಲಿ  ಹೊರಟಿದ್ದರು. ಅವರನ್ನು ತಡೆದಿದ್ದ ಸ್ಥಳೀಯರ ಗುಂಪು, ಮಕ್ಕಳನ್ನು ಕದಿಯಲು ಬಂದಿದ್ದೀಯಾ ಎಂದು ಹೇಳಿ ಹಲ್ಲೆ ಮಾಡಿತ್ತು.

ಹಲ್ಲೆಯ ನಂತರ ಸಂಜಯ್, ಅಲ್ಲಿಂದ ತಪ್ಪಿಸಿಕೊಂಡು ಓಡಿದ್ದರು. ಅವರನ್ನು ಬೆನ್ನಟ್ಟಿ ಮತ್ತಷ್ಟು ಹಲ್ಲೆ ಮಾಡಿದ್ದರು. ಇದಾದ ಎರಡು ದಿನಗಳ ನಂತರ ಕೆ.ಆರ್. ಪುರ ಠಾಣೆ ವ್ಯಾಪ್ತಿಯಲ್ಲಿ ಮೃತದೇಹ ಸಿಕ್ಕಿದೆ. ಕೊಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಆರೋಪಿಗಳ ಶೋಧ ನಡೆಯುತ್ತಿದೆ ಎಂದು ಡಿಸಿಪಿ ಗಿರೀಶ್ ತಿಳಿಸಿದರು.

Join Whatsapp
Exit mobile version