ಸಾಹಿಬ್’ಗಂಜ್: ಜಾರ್ಖಂಡ್’ನ ಸಾಹಿಬ್’ಗಂಜ್ ಜಿಲ್ಲೆಯಲ್ಲಿ ಕೆಲವು ದುಷ್ಕರ್ಮಿಗಳು ಮಹಿಳೆಯೊಬ್ಬರನ್ನು ಮಾಟಗಾತಿ ಎಂದು ಆರೋಪಿಸಿ ಆಕೆಯನ್ನು ವಿವಸ್ತ್ರಗೊಳಿಸಿ ಮರಕ್ಕೆ ಕಟ್ಟಿಹಾಕಿ ದೌರ್ಜನ್ಯವೆಸಗಿರುವ ಘಟನೆ ಗುರುವಾರ ನಡೆದಿದೆ.
ರಾಂಚಿಯಿಂದ ಸುಮಾರು 385 ಕಿ.ಮೀ ದೂರದಲ್ಲಿರುವ ಬರ್ಹೈತ್ ಪೊಲೀಸ್ ಠಾಣೆಗೆ ಸಂತ್ರಸ್ತೆ ಮಹಿಳೆ ನೀಡಿದ ದೂರಿನ ಆಧಾರದಲ್ಲಿ ಮೂವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
21 ಸಾವಿರ ಪಾವತಿಸುವ ಷರತ್ತಿನ ಮೇಲೆ ನನ್ನನ್ನು ಹಲ್ಲೆಕೋರರು ಬಿಡುಗಡೆಗೊಳಿಸಿದ್ದಾರೆ ಎಂದು ಸಂತ್ರಸ್ತ ಮಹಿಳೆ ಪೊಲೀಸರಲ್ಲಿ ದೂರಿದ್ದಾರೆ.
ಈ ಘಟನೆ 20 ದಿನಗಳ ಹಿಂದೆ ನಡೆದಿದ್ದು, ಇದನ್ನು ಗ್ರಾಮ ಪಂಚಾಯಿತಿಯಲ್ಲಿ ಇತ್ಯರ್ಥಪಡಿಸಲಾಗಿತ್ತು ಎಂಬುದನ್ನು ಮಹಿಳೆ ತಿಳಿಸಿರುವುದಾಗಿ ಬರ್ಹೈತ್ ಪೊಲೀಸ್ ಅಧಿಕಾರಿ ಗೌರವ್ ಕುಮಾರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಇದೀಗ ಅರೋಪಿಗಳು ಗ್ರಾಮವನ್ನು ತೊರೆದಿದ್ದು, ಅವರ ಪತ್ತೆಗೆ ಶೋಧ ಕಾರ್ಯ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿ ಗೌರವ್ ಕುಮಾರ್ ತಿಳಿಸಿದ್ದಾರೆ.
ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಮಾಡಲಾಗುತ್ತಿದೆ ಮತ್ತು ಇದಕ್ಕೆ ಸಂಬಂಧಿಸಿದಂತೆ ಕೆಲವು ಗ್ರಾಮಸ್ಥರನ್ನು ವಿಚಾರಿಸಲಾಗಿದೆ. ಆರೋಪಿಗಳು ಮತ್ತು ಸಂತ್ರಸ್ತೆ ನೆರೆಹೊರೆಯವರಾಗಿದ್ದು, ಅವರ ಮಧ್ಯೆ ಆಂತರಿಕ ಕಲಹವಿತ್ತು ಎಂದು ಗ್ರಾಮದ ಒಂದು ವಿಭಾಗ ತಿಳಿಸಿದೆ.